ADVERTISEMENT

ಕೇರಳದಲ್ಲಿ ಖಾತೆ ತೆರೆಯುವ ತವಕ

ಕಾಸರಗೋಡು, ಕಣ್ಣೂರು ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು

ಚಿದಂಬರ ಪ್ರಸಾದ್
Published 13 ಮಾರ್ಚ್ 2019, 20:50 IST
Last Updated 13 ಮಾರ್ಚ್ 2019, 20:50 IST
   

ಮಂಗಳೂರು: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿ, ಈ ಬಾರಿ ದೇವರ ನಾಡಿನಲ್ಲೂ ಖಾತೆ ತೆರೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಾಸರಗೋಡು, ಕಣ್ಣೂರು ಕ್ಷೇತ್ರಗಳತ್ತ ಪಕ್ಷ ದೃಷ್ಟಿ ನೆಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಾಸರಗೋಡು ಹಾಗೂ ಪಕ್ಕದಲ್ಲಿರುವ ಕಣ್ಣೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಮುಖಂಡರದ್ದಾಗಿದೆ. ಇತ್ತೀಚೆಗೆ ನಗರಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಕೂಡ ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡಿಗರೂ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಈ ಕ್ಷೇತ್ರದತ್ತ ಗಮನ ನೀಡಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಬಿಜೆಪಿ ಪ್ರಾಬಲ್ಯವಿದ್ದು, ಇದನ್ನು ಬಳಸಿಕೊಂಡು ಕಾಸರಗೋಡು, ಕಣ್ಣೂರಿನಲ್ಲಿ ಕೇಸರಿ ಬಾವುಟ ಹಾರಿಸುವಂತೆ ರಾಜನಾಥ ಸಿಂಗ್‌ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ADVERTISEMENT

ಶಬರಿಮಲೆ ಲೆಕ್ಕಾಚಾರ: ಕಾಸರಗೋಡು ಕ್ಷೇತ್ರಕ್ಕೆ ನಳಿನ್‌ಕುಮಾರ್ ಕಟೀಲ್‌ ಪ್ರಭಾರಿಯಾಗಿದ್ದು, ಶಬರಿಮಲೆ ವಿಷಯದಲ್ಲಿ ನಳಿನ್‌ ಸೇರಿದಂತೆ ಐವರ ತಂಡ ಈಗಾಗಲೇ ಕೇರಳದಾದ್ಯಂತ ಸಂಚರಿಸಿ, ವರದಿ ಸಿದ್ಧಪಡಿಸಿದೆ. ಇದರ ಜತೆಗೆ ಕಾಸರಗೋಡು, ಕಣ್ಣೂರಿನಲ್ಲಿ ಪಕ್ಷದ ಗೆಲುವಿಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ವರದಿಯನ್ನೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನೀಡಿದೆ.

ಅಯ್ಯಪ್ಪ ಸ್ವಾಮಿ ವ್ರತಧಾರಿಗಳ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಿಜೆಪಿ ಮುಖಂಡರು, ಆ ಮೂಲಕ ಕ್ಷೇತ್ರದಾದ್ಯಂತ ಬಿಜೆಪಿ ಪರ ವಾತಾವರಣ ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಶಬರಿಮಲೆ ವಿಷಯದಲ್ಲಿ ಬಿಜೆಪಿ ತಳೆದಿರುವ ನಿಲುವನ್ನು ಮತಗಳಾಗಿ ಪರಿವರ್ತಿಸುವ ಪ್ರಯತ್ನವೂ ಮುಂದುವರಿದಿದೆ ಎನ್ನಲಾಗುತ್ತಿದೆ.

ಮೂರನೇ ಸ್ಥಾನ: ಕಾಸರಗೋಡು ಹಾಗೂ ಕಣ್ಣೂರು ಕ್ಷೇತ್ರಗಳಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮೂರನೇ ಸ್ಥಾನ ಗಳಿಸಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ಮುಖಂಡರದ್ದು.

ಕಾಸರಗೋಡು ಕ್ಷೇತ್ರದಲ್ಲಿ ಸಿಪಿಎಂ ಪ್ರಾಬಲ್ಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2004ರ ಚುನಾವಣೆಯಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ಸಿಪಿಎಂ ಅಭ್ಯರ್ಥಿ ಪಿ.ಕರುಣಾಕರನ್‌, 2014 ರಲ್ಲಿ ಕೇವಲ 6,921 ಮತ
ಗಳಿಂದ ಗೆಲುವು ಸಾಧಿಸಿದ್ದರು. ಕಳೆದೆರಡು ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

17ರಂದು ಪ್ರಧಾನಿ ಮಂಗಳೂರಿಗೆ
ಪ್ರಧಾನಿ ನರೇಂದ್ರ ಮೋದಿ ಅವರು ಚುಣಾವಣಾ ಪ್ರಚಾರಕ್ಕಾಗಿ ಇದೇ 17 ರಂದು ಲಕ್ಷದ್ವೀಪಕ್ಕೆ ತೆರಳಲಿದ್ದು, ಮಾರ್ಗಮಧ್ಯೆ ನಗರಕ್ಕೆ ಬರಲಿದ್ದಾರೆ. ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬರುವ ಅವರು, ಇಲ್ಲಿಂದ ಲಕ್ಷದ್ವೀಪಕ್ಕೆ ತೆರಳಲಿದ್ದಾರೆ.

ಈ ಸಂದರ್ಭದಲ್ಲಿ ಕೇರಳ ಹಾಗೂ ಕರ್ನಾಟಕದ ಬಿಜೆಪಿ ಮುಖಂಡರ ಜತೆಗೆ ಮೋದಿ ಚರ್ಚಿಸಲಿದ್ದು, ಕೇರಳದಲ್ಲಿ ಬಿಜೆಪಿ ಗೆಲುವಿನ ಕುರಿತು ಪ್ರಸ್ತಾಪ ಆಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2014ರ ಫಲಿತಾಂಶ

ಕಾಸರಗೋಡು

ಅಭ್ಯರ್ಥಿ; ‍ಪಕ್ಷ; ಪಡೆದ ಮತ

ಪಿ. ಕರುಣಾಕರನ್‌; ಸಿಪಿಎಂ; 3,84,964

ಟಿ. ಸಿದ್ಧೀಕ್‌; ಕಾಂಗ್ರೆಸ್‌; 3,78,043

ಕೆ. ಸುರೇಂದ್ರನ್‌; ಬಿಜೆಪಿ; 1,72,826

ಕಣ್ಣೂರು ಕ್ಷೇತ್ರ

ಪಿ.ಕೆ. ಶ್ರೀಮತಿ; ಸಿಪಿಎಂ; 4,27,622

ಕೆ. ಸುಧಾಕರನ್‌; ಕಾಂಗ್ರೆಸ್‌; 4,21,056

ಪಿ.ಸಿ. ಮೋಹನನ್‌; ಬಿಜೆಪಿ; 51,636

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.