ADVERTISEMENT

ಸಂಸ್ಕೃತಿ ನಾಶಕ್ಕೆ ಬಿಜೆಪಿ ಯತ್ನ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 19:56 IST
Last Updated 14 ಏಪ್ರಿಲ್ 2021, 19:56 IST
ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ   

ಕೋಲ್ಕತ್ತ: ‘ಬಿಜೆಪಿಯು ಸುವರ್ಣ ಬಂಗಾಳ ನಿರ್ಮಿಸುವ ಭರವಸೆ ನೀಡುತ್ತಿದೆ. ಅದೊಂದು ಮರೀಚಿಕೆ, ಎಲ್ಲಾ ರಾಜ್ಯಗಳಲ್ಲಿ ಅವರು ಇದೇ ಕನಸನ್ನು ಬಿತ್ತುತ್ತಿದ್ದಾರೆ. ದ್ವೇಷ, ಹಿಂಸಾಚಾರ, ಭಾಷೆ–ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವುದನ್ನಲ್ಲದೆ ಬೇರೇನನ್ನೂ ಆ ಪಕ್ಷ ನೀಡಲಾರದು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಗೊಲಪೊಖರ್‌ನಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಟಿಎಂಸಿಯಂತೆ ನಮ್ಮ ಪಕ್ಷವು ಎಂದೆಂದಿಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲಾರದು. ನಮ್ಮದು ಬರಿಯ ರಾಜಕೀಯ ಹೋರಾಟವಲ್ಲ. ಬದಲಿಗೆ ಸೈದ್ಧಾಂತಿಕ ಹೋರಾಟವೂ ಆಗಿದೆ. ಮಮತಾ ಅವರಿಗೆ ಇದು ಬರಿಯ ರಾಜಕೀಯ ಹೋರಾಟ. ಕಾಂಗ್ರೆಸ್‌ ತನ್ನ ಮುಂದೆ ಶರಣಾಗುವುದಿಲ್ಲ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಅವರು ಕಾಂಗ್ರೆಸ್‌ಮುಕ್ತ ಭಾರತಕ್ಕೆ ಕರೆ ನೀಡಿದರೇ ವಿನಾ ಟಿಎಂಸಿ ಮುಕ್ತ ಬಂಗಾಳಕ್ಕೆ ಕರೆ ನೀಡಲಿಲ್ಲ’ ಎಂದರು.

ADVERTISEMENT

‘ಟಿಎಂಸಿಯು ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿಯು ಬಂಗಾಳದ ಸಂಸ್ಕೃತಿ, ಪರಂಪರೆಗಳನ್ನು ನಾಶಪಡಿಸಲು, ಜನರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಅಸ್ಸಾಂನಲ್ಲಿ ಅವರು ಇದನ್ನೇ ಮಾಡಿದ್ದಾರೆ. ತಮಿಳುನಾಡಿನಲ್ಲೂ ಅಂಥ ಪ್ರಯತ್ನ ಮಾಡಿದ್ದಾರೆ. ದ್ವೇಷವನ್ನಲ್ಲದೆ ಅವರ ಬಳಿ ಕೊಡಲು ಬೇರೇನೂ ಇಲ್ಲ’ ಎಂದು ರಾಹುಲ್‌
ಹೇಳಿದರು.

ಬಾಂಗ್ಲಾದ ‘ಕಟ್‌ ಮನಿ’ (ಕಮಿಷನ್‌) ಸಂಸ್ಕೃತಿಯನ್ನು ಉಲ್ಲೇಖಿಸಿದ ರಾಹುಲ್‌, ‘ಉದ್ಯೋಗ ಪಡೆಯಲು ಸಹ ಕಟ್‌ ಮನಿ ನೀಡಬೇಕಾಗಿರುವ ಏಕೈಕ ರಾಜ್ಯ ಇದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.