ADVERTISEMENT

ಬಿಜೆಪಿಯು ಹಿಂಬಾಗಿಲಿನಿಂದ ತೆಲಂಗಾಣ ತಲುಪಲಾಗದ್ದಕ್ಕೆ ಇ.ಡಿ ಬಳಸುತ್ತಿದೆ: ಕವಿತಾ

ಪಿಟಿಐ
Published 9 ಮಾರ್ಚ್ 2023, 10:58 IST
Last Updated 9 ಮಾರ್ಚ್ 2023, 10:58 IST
ಕೆ.ಕವಿತಾ (ಪಿಟಿಐ ಚಿತ್ರ)
ಕೆ.ಕವಿತಾ (ಪಿಟಿಐ ಚಿತ್ರ)   

ನವದೆಹಲಿ/ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ.ಕವಿತಾ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ತೆಲಂಗಾಣಕ್ಕೆ ಹಿಂಬಾಗಿಲಿನ ಮೂಲಕ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿನ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ಕವಿತಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕವಿತಾ, 'ಬಿಜೆಪಿಯು ಹಿಂಬಾಗಿಲಿನ ಮೂಲಕ 9 ರಾಜ್ಯಗಳಿಗೆ ಪ್ರವೇಶಿಸಿರುವುದನ್ನು ನೋಡಿದ್ದೇವೆ. ತೆಲಂಗಾಣದಲ್ಲಿಯೂ ಅದೇರೀತಿ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಇ.ಡಿ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದಕ್ಕೆಲ್ಲ ನಾವು ಹೆದರುವುದಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ವಿಚಾರಣೆ ಎದುರಿಸುತ್ತೇವೆ' ಎಂದಿದ್ದಾರೆ.

ADVERTISEMENT

'ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ, ಉದ್ಯೋಗ ಸೃಷ್ಟಿಸುವಂತೆ ಹಾಗೂ ಸಹಾಯಧನ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇವೆ. ನಮ್ಮಂಥವರಿಗೆ ಕಿರುಕುಳ ನೀಡಿ ಏನು ಪಡೆಯುವಿರಿ?' ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ, ತನಿಖಾ ಸಂಸ್ಥೆಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರಿಗೆ ಮಾರ್ಚ್‌ 9ರಂದು (ಗುರುವಾರ) ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು. ಆದರೆ, ಶನಿವಾರ (ಮಾ.11 ರಂದು) ಹಾಜರಾಗುವುದಾಗಿ ಕವಿತಾ ಬುಧವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.