ADVERTISEMENT

11 ವರ್ಷಗಳಲ್ಲಿ ಪ್ರಜಾಪ್ರಭುತ್ವಕ್ಕೆ ಭಾರಿ ಹಾನಿ ಮಾಡಿದ ಮೋದಿ ಸರ್ಕಾರ: ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2025, 9:54 IST
Last Updated 9 ಜೂನ್ 2025, 9:54 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ ಹಾಗೂ  ನರೇಂದ್ರ ಮೋದಿ </p></div>

ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ

   

–ಪಿಟಿಐ ಚಿತ್ರಗಳು

ನವದೆಹಲಿ: ಕೇಂದ್ರದಲ್ಲಿ ಅಧಿಕಾರಕ್ಕೇರಿ 11 ವರ್ಷ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, 'ಮೋದಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಭಾರಿ ಹಾನಿ ಮಾಡಿದೆ' ಎಂದು ಕಿಡಿಕಾರಿದ್ದಾರೆ.

ಮುಂದುವರಿದು, 'ಬಿಜೆಪಿ – ಆರ್‌ಎಸ್‌ಎಸ್‌, ತಮ್ಮದೇ ಸ್ವಾಯತ್ತ ಆಡಳಿತದ ಮೂಲಕ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯ ಮೇಲೂ ದಾಳಿ ನಡೆಸಿ, ದುರ್ಬಲಗೊಳಿಸಿವೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕದಿಯುವುದೇ ಇರಲಿ, ಹಿಂಬಾಗಿಲ ರಾಜಕೀಯ ಅಥವಾ ಸರ್ವಾಧಿಕಾರದ ಮೂಲಕ ಸರ್ಕಾರಗಳನ್ನು ಉರುಳಿಸುವುದೇ ಆಗಿರಲಿ. ಈ ಅವಧಿಯಲ್ಲಿ (11 ವರ್ಷಗಳಲ್ಲಿ) ರಾಜ್ಯಗಳ ಹಕ್ಕುಗಳನ್ನು ಕಡೆಗಣಿಸಲಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯು ಬಲಹೀನವಾಗಿದೆ' ಎಂದು ಟೀಕಿಸಿದ್ದಾರೆ.

'ಸಮಾಜದಲ್ಲಿ ದ್ವೇಷ, ಬೆದರಿಕೆ ಮತ್ತು ಭಯವನ್ನು ಹರಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಎಸ್‌ಸಿ–ಎಸ್‌ಟಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಅವರ ಮೀಸಲಾತಿ ಮತ್ತು ಸಮಾನತೆಯ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ನಡೆಯುತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ಆಡಳಿತ ವೈಫಲ್ಯಕ್ಕೆ ಜ್ವಲಂತ ಸಾಕ್ಷಿಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಯುಪಿಎ ಸರ್ಕಾರದ ಅವಧಿಯಲ್ಲಿ ಸರಾಸರಿ ಶೇ 8 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರವು ಶೇ 5–6ಕ್ಕೆ ಕುಸಿಯಲು ಬಿಜೆಪಿ – ಆರ್‌ಎಸ್‌ಎಸ್‌ ಕಾರಣ. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಈಡೇರಿಸುವ ಬದಲು, ಯುವಕರಿಂದ ಕೋಟ್ಯಂತರ ಉದ್ಯೋಗಗಳನ್ನು ಕಸಿದುಕೊಳ್ಳಲಾಗಿದೆ. ಹಣದುಬ್ಬರದ ಪರಿಣಾಮವಾಗಿ ಸಾರ್ವಜನಿಕ ಉಳಿತಾಯದ ಪ್ರಮಾಣವು 50 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಆರ್ಥಿಕ ಅಸಮಾನತೆಯು 100 ವರ್ಷಗಳಲ್ಲೇ ಅತ್ಯಧಿಕವಾಗಿದೆ. ನೋಟುರದ್ದತಿ ನಿರ್ಧಾರ, ದೋಷಪೂರಿತ ಜಿಎಸ್‌ಟಿ, ಸರಿಯಾದ ಯೋಜನೆ ಇಲ್ಲದ ಲಾಕ್‌ಡೌನ್ ಜಾರಿಯ ಜೊತೆಗೆ ಅಸಂಘಟಿತ ವಲಯದ ಶೋಷಣೆಯು ಕೋಟ್ಯಂತರ ಜನರ ಭವಿಷ್ಯವನ್ನು ಹಾಳುಮಾಡಿದೆ' ಎಂದು ದೂರಿದ್ದಾರೆ.

'ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಮೂಲಸೌಕರ್ಯ ಯೋಜನೆಗಳ ಟೇಪ್‌ ಕತ್ತರಿಸಿದ್ದು ಬಿಟ್ಟರೆ, ಕೇಂದ್ರ ಸರ್ಕಾರದ ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟ್ಯಾಂಡ್‌ ಅಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ನಮಾಮಿ ಗಂಗೆ, ಸ್ಮಾರ್ಟ್‌ ಸಿಟಿ ಯೋಜನೆಗಳೆಲ್ಲವೂ ವೈಫಲ್ಯ ಅನುಭವಿಸಿದವು. ರೈಲ್ವೇ ಹಳಿತಪ್ಪಿತು' ಎಂದು ಟೀಕಾಪ್ರಹಾರ ಮಾಡಿದ್ದಾರೆ.

'ಮೋದಿ ಸರ್ಕಾರವು ಸಂವಿಧಾನಸ ಪ್ರತಿ ಪುಟಕ್ಕೂ ಸರ್ವಾಧಿಕಾರದ ಶಾಯಿ ಬಳಿಯುವ ಮೂಲಕ 11 ವರ್ಷಗಳನ್ನು ವ್ಯರ್ಥ ಮಾಡಿದೆ' ಎಂದೂ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.