ನವದೆಹಲಿ: ‘ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡಲು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡಲಿವೆ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಶನಿವಾರ ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ಹಿತಾಸಕ್ತಿ ಕಾಪಾಡುವ ಉದ್ದೇಶಕ್ಕಾಗಿ ರಾಜಕೀಯ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಕೆಲವರು ಚುನಾವಣೆಗೆ ಮುನ್ನ ಕೈಜೋಡಿಸಿದರೆ ಮತ್ತೆ ಕೆಲವು ಚುನಾವಣೆ ನಂತರ ಬಿಜೆಪಿಯೇತರ ಒಕ್ಕೂಟ ಸೇರಬಹುದು’ ಎಂದು ಹೇಳಿದರು.
‘ಪರ್ಯಾಯ ರಾಜಕೀಯ ಶಕ್ತಿ ರೂಪಿಸುವುದಕ್ಕೆ ಎಲ್ಲರೂ ಶ್ರಮಿಸಬೇಕು. ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಈಗಾಗಲೇ ಈ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದರು.
‘ಪರ್ಯಾಯ ಶಕ್ತಿ ರಚನೆ ಕಾರ್ಯಕ್ಕೆ ಯಾರಾದರೂ ನೇತೃತ್ವ ವಹಿಸಿದರೆ ನಾನು ಅವರನ್ನು ಬೆಂಬಲಿಸುತ್ತೇನೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಚಂದ್ರಬಾಬು ನಾಯ್ಡು ಭೇಟಿಯಾಗಿ ಮಾತುಕತೆ ನಡೆಸಿದರು.
***
ಬಿಜೆಪಿ ಒತ್ತಡದ ಕಾರಣದಿಂದ ಕೆಲವರು ವಿರೋಧಿ ಮೈತ್ರಿಕೂಟ ಸೇರಲು ಭಯ ಪಡುತ್ತಿದ್ದಾರೆ. ಪ್ರಜಾಸತ್ತಾತ್ಮಕ ಒಕ್ಕೂಟ ರಚನೆಗೆ ಹಲವರನ್ನು ಭೇಟಿಯಾಗಲಿದ್ದೇನೆ.
– ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.