ADVERTISEMENT

ಪ. ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಟಿಎಂಸಿ ಮಾಡಿದ ಕೊಲೆ ಎಂದು ಆರೋಪ

ಪಿಟಿಐ
Published 12 ನವೆಂಬರ್ 2020, 12:04 IST
Last Updated 12 ನವೆಂಬರ್ 2020, 12:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಾಂತಿ: ಪಶ್ಚಿಮ ಬಂಗಾಳದ ಪೂರ್ವ ಮೆದಿನೀಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಶವ ಪತ್ತೆಯಾಗಿದೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಟಿಎಂಸಿಯ 'ಗೂಂಡಾಗಳು' ಈ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಆಡಳಿತಾರೂಢ ಟಿಎಂಸಿ, ಇದೆಲ್ಲವೂ 'ಆಧಾರರಹಿತ ಮತ್ತು ಅಸತ್ಯ,' ಎಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, 'ಪೂರ್ವ ಮೆದಿನೀಪುರ ಜಿಲ್ಲೆಯ ಇಟಾಬೇರಿಯಾ ಎಂಬಲ್ಲಿ ಬುಧವಾರ ರಾತ್ರಿ ಗೋಕುಲ್ ಜೆನಾ ಎಂಬವರ ಶವ ಸಿಕ್ಕಿದೆ. ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ,' ಎಂದು ತಿಳಿಸಿದ್ದಾರೆ.

ADVERTISEMENT

ಪ್ರಕರಣದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕ, 'ಕಾಂತಿ ಭಗಬಾನ್‌ಪುರ ವಿಧಾನಸಭೆಯ ಬಿಜೆಪಿ ಬೂತ್ ಕಾರ್ಯಕರ್ತರಾಗಿದ್ದ ಗೋಕುಲ್ ಜೆನಾ ಅವರನ್ನು ಟಿಎಂಸಿ ಗೂಂಡಾಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಕರೋನಾ ಸೋಂಕಿಗೊಳಗಾಗಿದ್ದ ಟಿಎಂಸಿ ಪಂಚಾಯತ್ ಸದಸ್ಯರ ಪತಿಗೆ ಕ್ವಾರಂಟೈನ್‌ನಲ್ಲಿ ಇರುವುಂತೆ ಹೇಳಿದ್ದೇ ಅವರ ಅಪರಾಧ?' ಎಂದು ಬರೆದುಕೊಂಡಿದ್ದಾರೆ.

'ಬಂಗಾಳದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಆಡಳಿತದ ಅಡಿಯಲ್ಲಿ ಪ್ರಜಾಪ್ರಭುತ್ವವು ಹೇಗೆ ಉಳಿಯಲು ಸಾಧ್ಯ,' ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

'ಗೋಕುಲ್‌ ಜೆನಾ ಅವರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ. ಪೊಲೀಸರು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರನ್ನು ಟಿಎಂಸಿ ಹತ್ಯೆ ಮಾಡಿದೆ. ಆದರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆಡಳಿತ ಪಕ್ಷವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿಲ್ಲ,' ಎಂದು ಬಿಜೆಪಿ ಮುಖಂಡ ಸ್ಯಾಂತನ್‌ ಬಸು ಹೇಳಿದ್ದಾರೆ.

'ಬಿಜೆಪಿಯ ಆರೋಪಗಳು ಸುಳ್ಳಿನ ಕಂತೆ,' ಎಂದು ಹೇಳಿರುವ ಟಿಎಂಸಿ, ಈ ಘಟನೆಗೂ ತನ್ನ ಕಾರ್ಯಕರ್ತರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದೆ.

'ಗೋಕುಲ್‌ ಜೆನಾ ಅವರ ಸಾವಿನ ಬಗ್ಗೆ ಸಮಗ್ರ ತನಿಖೆಗೆ ನಾವು ಆಗ್ರಹಿಸುತ್ತೇವೆ. ವಿಧಾನಸಭಾ ಚುನಾವಣೆಯವರೆಗೆ ಬಿಜೆಪಿಯು ಮೃತರ ವಿಷಯದಲ್ಲಿ ರಾಜಕೀಯ ಮಾಡುತ್ತದೆ,' ಎಂದು ಟಿಎಂಸಿ ಜಿಲ್ಲಾ ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.