ದೆಹಲಿ ಪೊಲೀಸ್
(ಪಿಟಿಐ ಚಿತ್ರ)
ನವದೆಹಲಿ: ದೆಹಲಿಯ ರೋಹಿಣಿ ನಗರದ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಮಲ್ಟಿಪ್ಲೆಕ್ಸ್ ಬಳಿ ಗುರುವಾರ ಸ್ಫೋಟ ಸಂಭವಿಸಿ, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಸಿಆರ್‌ಪಿಎಫ್ ಶಾಲೆಯ ಗೋಡೆಯ ಮೇಲೆ ಅ.20ರಂದು ಸ್ಫೋಟ ಸಂಭವಿಸಿದ್ದ ಪ್ರದೇಶದಲ್ಲೇ ಉದ್ಯಾನದ ಸಮೀಪ ಸಿಹಿ ತಿನಿಸು ಅಂಗಡಿ ಬಳಿ ಈ ಸ್ಫೋಟ ನಡೆದಿದೆ.
ಸ್ಫೋಟದ ಸಮಯದಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಮೂರು ಚಕ್ರ ವಾಹನದ ಚಾಲಕ ಚೇತನ್ ಕುಶ್ವಾಹ (28) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟ ನಡೆದ ಸ್ಥಳದಲ್ಲಿ ಚೆಲ್ಲಿದ್ದ ‘ಬಿಳಿ ಪುಡಿ’ಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಬೆಳಿಗ್ಗೆ ಸುಮಾರು 11.48ಕ್ಕೆ ಪ್ರಶಾಂತ್ ವಿಹಾರ್ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದೆವು’ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ನಾಗರಿಕರಲ್ಲಿ ಆತಂಕ ಮನೆಮಾಡಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡದ ಕೇಂದ್ರ:
ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಇದೇ ಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಇದು ಕಾನೂನು ಕಟ್ಟುನಿಟ್ಟಿನ ಜಾರಿ ಮತ್ತು ಸುರಕ್ಷತಾ ಕ್ರಮಗಳ ವೈಫಲ್ಯವನ್ನು ಸೂಚಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆಗೆ ಜವಾಬ್ದಾರರಾಗಿದ್ದಾರೆ. ರಾಜಧಾನಿಯಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.