ADVERTISEMENT

ಎಸ್‌ಐಆರ್ ಒತ್ತಡ ಆರೋಪ: ಕೇರಳದಲ್ಲಿ ಬಿಎಲ್‌ಒ ಆತ್ಮಹತ್ಯೆ

ಪಿಟಿಐ
Published 16 ನವೆಂಬರ್ 2025, 13:39 IST
Last Updated 16 ನವೆಂಬರ್ 2025, 13:39 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕಣ್ಣೂರು(ಕೇರಳ): ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್‌ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೆಲಸದ ಒತ್ತಡ ಇತ್ತು ಎಂದು ಹೇಳಲಾಗಿದೆ.

ADVERTISEMENT

ಪಯ್ಯಣ್ಣೂರು ಸರ್ಕಾರಿ ಶಾಲೆಯ ಗುಮಾಸ್ತರಾಗಿದ್ದ ಅನೀಶ್ ಜಾರ್ಜ್‌ ಮೃತ ವ್ಯಕ್ತಿ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೆಲಸದ ಒತ್ತಡದಿಂದಲೇ ಅನೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಅನೀಶ್ ಮೃತದೇಹ ಅವರ ಮನೆಯ ಮೊದಲ ಮಹಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬಿಎಲ್‌ಒ ಕರ್ತವ್ಯದ ಒತ್ತಡದಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅತಿಯಾದ ಕೆಲಸ ಮತ್ತು ಎಸ್‌ಐಆರ್‌ ಅನ್ನು ಬೇಗ ಮುಗಿಸುವ ಒತ್ತಡದ ಬಗ್ಗೆ ಅನೀಶ್‌ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಅನೀಶ್ ಕುಟುಂಬದ ಆಪ್ತ ಶ್ಯಾಮ್‌ ಎಂಬುವವರು ಹೇಳಿದ್ದಾರೆ.

ಭಾನುವಾರ ಮುಂಜಾನೆ 2 ಗಂಟೆವರೆಗೂ ಅನೀಶ್‌ ಕೆಲಸ ಮಾಡುತ್ತಿದ್ದರು. ಎಸ್‌ಐಆರ್ ಅರ್ಜಿಗಳನ್ನು ಭರ್ತಿ ಮಾಡುವ ಮತ್ತು ತನಗೆ ನೀಡಿದ ಪ್ರದೇಶದ ಪ್ರತಿಯೊಬ್ಬರಿಗೂ ವಿತರಿಸುವ ಒತ್ತಡದಲ್ಲಿ ಅವರು ಇದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಣ್ಣೂರು ಜಿಲ್ಲಾಧಿಕಾರಿ ಬಳಿ ಘಟನೆಯ ಕುರಿತು ವರದಿ ಕೇಳಿದ್ದೇವೆ. ಬಿಎಸ್‌ಒಗಳಿಗೆ ಕಾರ್ಯದೊತ್ತಡ ಇರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ರತನ್‌.ಯು ಕೇಲ್ಕರ್‌ ತಿಳಿಸಿದ್ದಾರೆ.

ಎಸ್‌ಐಆರ್‌ ನಡೆಯುವ 31 ದಿನಗಳವರೆಗೆ ಬಿಎಲ್‌ಒಗಳು ಮತ್ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ. ಹೀಗಾಗಿ ಒತ್ತಡ ಉದ್ಭವಿಸದು. ತನಿಖಾ ವರದಿ ನಂತರ ಎಲ್ಲವೂ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಕುಟುಂಬದ ಇತರೆ ಸದಸ್ಯರು ಚರ್ಚ್‌ಗೆ ಹೋಗಿದ್ದಾಗ ಭಾನುವಾರ ಮುಂಜಾನೆ ಅನೀಶ್ ಜಾರ್ಜ್‌ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎಸ್‌ಐಆರ್‌ ಕೆಲಸದಿಂದಾಗಿ ಜಾರ್ಜ್‌ ಚರ್ಚ್‌ಗೆ ಹೋಗಿರಲಿಲ್ಲ. ಅವರಿಗೆ ತಂದೆ–ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಇದ್ದರು.

ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಎಸ್‌ಐಆರ್‌ ಅನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.

‘ಅನೀಶ್‌ ಅವರಿಗೆ ಎಲ್ಲರ ಮನೆಗಳ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಮತಗಟ್ಟೆ ಏಜೆಂಟ್ ಸಹಕಾರವನ್ನು ಅವರು ಪಡೆಯುತ್ತಿದ್ದರು. ಇದರಿಂದಾಗಿ ಇತರೆ ಪಕ್ಷಗಳ ಕಾರ್ಯಕರ್ತರು ಅವರನ್ನು ಬೆದರಿಸಿದ್ದರು’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ತನಗೆ ಆಗುತ್ತಿರುವ ಕೆಲಸದ ಒತ್ತಡದ ಬಗ್ಗೆ ಅನೀಶ್ ಜಾರ್ಜ್‌ ಜಿಲ್ಲಾಧಿಕಾರಿಗೆ ಈಗಾಗಲೇ ದೂರು ನೀಡಿದ್ದರು ಎಂದು ಖಚಿತಪಡಿಸದ ವರದಿಗಳು ಹರಿದಾಡುತ್ತಿವೆ.

ಎಸ್‌ಐಆರ್‌ ಕೆಲಸದಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಿಗೆ (ಬಿಎಲ್‌ಒ) ಭಾರಿ ಒತ್ತಡ ಇದೆ. ತನ್ನ ಜೀವ ಕಳೆದುಕೊಳ್ಳುವುದಲ್ಲದೇ ಬೇರೆ ದಾರಿ ಇಲ್ಲ ಎಂದು ಅವರಿಗೆ ಅನಿಸಿರಬಹುದು ಎಂದು ಸಿಪಿಎಂ ನಾಯಕ ಎಂ.ವಿ. ಜಯರಾಜನ್‌ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ರಿಜಿಲ್ ಮಕ್ಕುಟ್ಟಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಸೂಚಿಯನ್ನು ಪೂರೈಸಲು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಎಸ್‌ಐಆರ್‌ ಜಾರಿಗೊಳಿಸಬೇಕು ಎನ್ನುವ ಚುನಾವಣಾ ಆಯೋಗದ ಪ್ರಯತ್ನಕ್ಕೆ ಅನೀಶ್‌ ಬಲಿಪಶುವಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಆಯೋಗ ಎಸ್‌ಐಆರ್‌ ಪ್ರಕ್ರಿಯೆ ಸ್ಥಗಿತಗೊಳಿಸಲಿ ಎಂದು ಆಗ್ರಹಿಸಿದ್ದಾರೆ.

ಕೇರಳದಲ್ಲಿ ಶನಿವಾರದವರೆಗೂ 2.51 ಕೋಟಿಗೂ ಹೆಚ್ಚು ಮತದಾರರಿಗೆ (ಶೇ 90) ಎಣಿಕೆ (ಸಮೀಕ್ಷೆ) ಅರ್ಜಿಗಳನ್ನು ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.