ADVERTISEMENT

ರಫೇಲ್‌ನಿಂದ ಮೋದಿಗೆ ಮತ್ತೆ ಅಧಿಕಾರ

ಬೊಫೋರ್ಸ್‌ ಕಾಂಗ್ರೆಸ್‌ ಅನ್ನು ಮುಳುಗಿಸಿತ್ತು: ಲೋಕಸಭೆಯಲ್ಲಿ ರಕ್ಷಣಾ ಸಚಿವೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:00 IST
Last Updated 4 ಜನವರಿ 2019, 20:00 IST
ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾತಿನ ವೈಖರಿ
ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾತಿನ ವೈಖರಿ   

ನವದೆಹಲಿ: ‘ಬೊಫೋರ್ಸ್ ಒಂದು ಹಗರಣವಾಗಿತ್ತು. ಆದರೆ ರಫೇಲ್‌ನಲ್ಲಿ ಹಗರಣವಿಲ್ಲ. ಬೊಫೋರ್ಸ್ ಕಾಂಗ್ರೆಸ್‌ ಅನ್ನು ಮುಳುಗಿಸಿತು. ಆದರೆ ರಫೇಲ್, ಮೋದಿಯನ್ನು ಮತ್ತೆ ಅಧಿಕಾರಕ್ಕೆ ತರಲಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು.

ರಫೇಲ್ ಒಪ್ಪಂದ ಕುರಿತು ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ರಫೇಲ್ ವಿಚಾರದಲ್ಲಿ ಕಾಂಗ್ರೆಸ್, ದೇಶದ ಜನರ ಹಾದಿತಪ್ಪಿಸುತ್ತಿದೆ. 126 ಯುದ್ಧವಿಮಾನಗಳ ಖರೀದಿ ಒಪ್ಪಂದವನ್ನು ಮತ್ತು 36 ಯುದ್ಧವಿಮಾನಗಳ ಖರೀದಿ ಒಪ್ಪಂದಕ್ಕೆ ಹೋಲಿಸಲು ಸಾಧ್ಯವಿಲ್ಲ. ಹಾರಾಟಕ್ಕೆ ಸಿದ್ಧವಾಗಿರುವ 18 ಯುದ್ಧವಿಮಾನಗಳನ್ನಷ್ಟೇ ಖರೀದಿಸಲು ಯುಪಿಎ ನಿರ್ಧರಿಸಿತ್ತು. ನಾವು ಅಂತಹ 36 ಯುದ್ಧವಿಮಾನಗಳನ್ನು ಖರೀದಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ADVERTISEMENT

‘ಕಾಂಗ್ರೆಸ್ ಅಷ್ಟೆಲ್ಲಾ ವರ್ಷ ಸಮಯ ತೆಗೆದುಕೊಂಡರೂ, 2014ರಲ್ಲೂ ಒಂದು ವಿಮಾನವೂ ಭಾರತಕ್ಕೆ ಬರಲಿಲ್ಲ. ಆದರೆ 2019ರ ಸೆಪ್ಟೆಂಬರ್‌ನಲ್ಲಿ ಮೊದಲ ರಫೇಲ್ ಭಾರತಕ್ಕೆ ಬರಲಿದೆ. 2022ರಲ್ಲಿ ಕೊನೆಯ ರಫೇಲ್ ಭಾರತಕ್ಕೆ ಬರಲಿದೆ. ಹಿಂದಿನ ಒಪ್ಪಂದದಲ್ಲಿ ಕಾಂಗ್ರೆಸ್‌ಗೆ ಹಣ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಒಪ್ಪಂದವನ್ನು ಅಂತಿಮಗೊಳಿಸಲಿಲ್ಲ. ಈ ಮೂಲಕ ದೇಶದ ಭದ್ರತೆ ಮತ್ತು ವಾಯುಪಡೆಯ ಸಾಮರ್ಥ್ಯಕ್ಕೆ ಅವರು ಧಕ್ಕೆ ತಂದರು’ ಎಂದು ಅವರು ಆರೋಪಿಸಿದರು.

‘ವಿಮಾನದ ಬೆಲೆಯನ್ನು₹ 526 ಕೋಟಿಗೆ ಅಂತಿಮಗೊಳಿಸಿದ್ದಕ್ಕೆ ಯಾವುದೇ ಆಧಾರವಿಲ್ಲ. ₹ 526 ಕೋಟಿಯನ್ನು ₹ 1,600 ಕೋಟಿಗೆ ಹೋಲಿಸುವುದು ಕಿತ್ತಳೆಯನ್ನು ಸೇಬಿಗೆ ಹೋಲಿಸಿದಂತೆ. ಖಾಲಿ ವಿಮಾನ ಮತ್ತು ಶಸ್ತ್ರಸಜ್ಜಿತ ವಿಮಾನದ ನಡುವೆ ಹೋಲಿಕೆ ಸಾಧ್ಯವೇ? 2007ರಲ್ಲಿ ಹೇಳಿದ್ದ ಬೆಲೆಯೇ 2016ರಲ್ಲೂ ಉಳಿದಿರುತ್ತದೆಯೇ? ಬೆಲೆ ಹೆಚ್ಚಳ ಮತ್ತು ದರ ವಿನಿಮಯದಲ್ಲಿ ವ್ಯತ್ಯಾಸವಾಗಿರುವುದಿಲ್ಲವೇ’ ಎಂದು ರಕ್ಷಣಾ ಸಚಿವೆ ಕಾಂಗ್ರೆಸ್ ಸದಸ್ಯರನ್ನು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯವು ಮಧ್ಯವರ್ತಿಗಳಿಲ್ಲದೆಯೇ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ಗೆ ಅದರ ಖಜಾನೆಯ ಬಗ್ಗೆ ಮಾತ್ರ ಕಾಳಜಿಯಿತ್ತು. ಆದರೆ ಮೋದಿ ಅವರು ದೇಶದ ಭದ್ರತೆಗೆ ಆದ್ಯತೆ ನೀಡಿದ್ದಾರೆ’ ಎಂದು ಅವರು ಹೇಳಿದರು.

ರಫೇಲ್ ವಿಚಾರದಲ್ಲಿ ಫ್ರಾನ್ಸ್‌ನ ಹಿಂದಿನ ಅಧ್ಯಕ್ಷರ ಜತೆ ಮಾತನಾಡಿರುವುದಾಗಿ ರಾಹುಲ್ ಸುಳ್ಳು ಹೇಳಿದ್ದಾರೆ. ಆ ಮಾತುಕತೆ ನಿಜವೇ ಆಗಿದ್ದಲ್ಲಿ ಅದನ್ನು ಅವರು ಸದನದಲ್ಲಿ ದೃಢಪಡಿಸಲಿ ಎಂದು ನಿರ್ಮಲಾ ಸವಾಲು ಎಸೆದರು.

‘ಒಂದು ಪ್ರಶ್ನೆಗೂ ಉತ್ತರಿಸಲಿಲ್ಲ’

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾನು ಕೇಳಿದ ಯಾವ ಪ್ರಶ್ನೆಗೂ ರಕ್ಷಣಾ ಸಚಿವರು ಉತ್ತರಿಸಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ರಫೇಲ್ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಿರ್ಮಲಾ ಸೀತಾರಾಮನ್ ಮಾಡಿದ ಟೀಕೆಗೆ ಅವರು ಸದನದಲ್ಲೇ ಪ್ರತಿಕ್ರಿಯೆ ನೀಡಿದರು.

‘ರಫೇಲ್ ಹಗರಣದಲ್ಲಿ ಸುಳ್ಳೊಂದನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ನಿರ್ಮಲಾ ಸೀತಾರಾಮನ್ ಬೇರೇನೂ ಮಾಡಿಲ್ಲ. ರಫೇಲ್ ಒಪ್ಪಂದದ ವಿದೇಶಿ ಪಾಲುದಾರಿಕೆಯ ಬಹುಭಾಗ ಅನಿಲ್ ಅಂಬಾನಿ ಅವರಿಗೆ ದೊರೆತಿದೆ. ಆದರೆ ನೀವು ನಿಮ್ಮ ಭಾಷಣದಲ್ಲಿ ಒಮ್ಮೆಯೂ ಆ ಬಗ್ಗೆ ಪ್ರಸ್ತಾಪಿಸಲಿಲ್ಲ. ಎಚ್‌ಎಎಲ್‌ನಿಂದ ಒಪ್ಪಂದವನ್ನು ಕಸಿದುಕೊಂಡಿದ್ದು ಏಕೆ ಎಂದು ಒಮ್ಮೆಯೂ ನೀವು ಹೇಳಲಿಲ್ಲ’ ಎಂದು ರಾಹುಲ್ ಗಾಂಧಿ ಹರಿಹಾಯ್ದರು.

ಇದಕ್ಕೆ ನಿರ್ಮಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ನೀವು ನನ್ನನ್ನು ಸುಳ್ಳಿ ಎನ್ನುತ್ತಿದ್ದೀರಿ. ನನ್ನನ್ನಾಗಲೀ, ಪ್ರಧಾನಿಯನ್ನಾಗಲೀ ಕಳ್ಳರು–ಸುಳ್ಳರು ಎಂದು ಕರೆಯುವ ಅಧಿಕಾರ ಯಾರಿಗೂ ಇಲ್ಲ. ನಾವು ಸಾಮಾನ್ಯ ಕುಟುಂಬದಿಂದ ಬಂದವರಿರಬಹುದು. ಆದರೆ ನಮಗೂ ಆತ್ಮಗೌರವವಿದೆ’ ಎಂದು ಅವರು ಕಿಡಿಕಾರಿದರು.

***

ವಿದೇಶಿ ಪಾಲುದಾರಿಕೆ ಬಗ್ಗೆ ನಾವು ಒಪ್ಪಂದದಲ್ಲಿ ಮಾತುಕತೆ ನಡೆಸಿಯೇ ಇಲ್ಲ. ರಫೇಲ್‌ಗೆ ಸಂಬಂಧಿಸಿದಂತೆ ಭಾರತದ ಹತ್ತಾರು ಕಂಪನಿಗಳ ಜತೆ ಡಾಸೋ ಪಾಲುದಾರಿಕೆ ಮಾಡಿಕೊಂಡಿದೆ

–ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ

ಭಾರತೀಯ ಪಾಲುದಾರಿಕೆಗೆ ಅನಿಲ್ ಅಂಬಾನಿಯ ಹೆಸರನ್ನು ಮೋದಿಯೇ ಸೂಚಿಸಿದ್ದರು ಎಂದು ಫ್ರಾನ್ಸ್‌ನ ಹಿಂದಿನ ಅಧ್ಯಕ್ಷರೇ ಹೇಳಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?

–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಪ್ರಧಾನಿ ಮೋದಿಯನ್ನು ಗುರಿಮಾಡಿಕೊಂಡೇ ಹಲವು ಪ್ರಶ್ನೆಗಳನ್ನು ಎತ್ತಲಾಗಿದೆ. ಅವರು ಸದನಕ್ಕೆ ಬಂದು ಚರ್ಚೆಯಲ್ಲಿ ಭಾಗವಹಿಸಬೇಕು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು

–ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ

ಈ ಒಪ್ಪಂದದಲ್ಲಿ ಪಾರದರ್ಶಕತೆಯ ಕೊರತೆ ಇದೆ. ರಕ್ಷಣಾ ವಿಚಾರದಲ್ಲಿ ಪ್ರಧಾನಿ ಮೋದಿ ಏಕಾಂಗಿಯಾಗಿ ನಿರ್ಧಾರ ಹೇಗೆ ತೆಗೆದುಕೊಂಡರು? ವಿಮಾನಗಳ ಸಂಖ್ಯೆಯನ್ನು ಇಳಿಕೆ ಮಾಡಿದ್ದೇಕೆ?

–ಎನ್‌.ಕೆ.ಪ್ರೇಮಚಂದ್ರನ್, ಆರ್‌ಎಸ್‌ಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.