ADVERTISEMENT

ಮುಂಬೈನ 3 ರೈಲು ನಿಲ್ದಾಣ, ಅಮಿತಾಬ್‌ ಬಚ್ಚನ್‌ ಮನೆಗೆ ಬಾಂಬ್‌ ಇಟ್ಟ ಬಗ್ಗೆ ಕರೆ!

ಪಿಟಿಐ
Published 7 ಆಗಸ್ಟ್ 2021, 4:14 IST
Last Updated 7 ಆಗಸ್ಟ್ 2021, 4:14 IST
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನ ಪ್ರಾತಿನಿಧಿಕ ಚಿತ್ರ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನ ಪ್ರಾತಿನಿಧಿಕ ಚಿತ್ರ    

ಮುಂಬೈ: ಬಾಂಬ್‌ ಇಟ್ಟಿರುವ ಬಗ್ಗೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಂಗಲೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕೂ ಸ್ಥಳಗಳಲ್ಲಿ ಬಾಂಬ್‌ ನಿಷ್ಕ್ರಿಯ ದಳ ಶೋಧ ನಡೆಸಿದೆಯಾದರೂ, ಅನುಮಾನಾಸ್ಪದವಾದ ಯಾವ ವಸ್ತುಗಳೂ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಶುಕ್ರವಾರ ರಾತ್ರಿ ಕರೆ ಬಂದಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ (ಸಿಎಸ್‌ಎಂಟಿ), ಬೈಕುಲ್ಲಾ, ದಾದರ್ ರೈಲ್ವೆ ನಿಲ್ದಾಣ ಮತ್ತು ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಯಲ್ಲಿ ಬಾಂಬ್‌ ಇರಿಸಿರುವುದಾಗಿ ಕರೆ ಮಾಡಿದವರು ಹೇಳಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಕರೆ ಬಂದ ನಂತರ, ರೈಲ್ವೆ ಪೋಲಿಸರು, ರೈಲ್ವೆ ಭದ್ರತಾ ದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನದಳ ಮತ್ತು ಸ್ಥಳೀಯ ಪೋಲಿಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು’ ಎಂದು ಅವರು ಹೇಳಿದರು.

‘ಇದುವರೆಗೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ, ಆದರೆ ಅಲ್ಲಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದೆ" ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.