ಮುಂಬೈ: ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಕುರಿತಾದ ಮಾನಹಾನಿಕರ ಎನ್ನಲಾದ 6 ವಿಡಿಯೊಗಳನ್ನು ಅಳಿಸಿ ಹಾಕುವಂತೆ ಇಬ್ಬರು ಯೂಟ್ಯೂಬರ್‌ಗಳಿಗೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಈ ವಿಡಿಯೊಗಳು ಮೇಲ್ನೋಟಕ್ಕೆ ಮಾನಹಾನಿಕರ ರೀತಿಯಲ್ಲಿವೆ ಎನ್ನುವ ಅರ್ಜಿದಾರರ ಅಭಿಪ್ರಾಯ ಪರಿಗಣಿಸಿ, ತಕ್ಷಣವೇ ವಿಡಿಯೊಗಳನ್ನು ಅಳಿಸಿ ಹಾಕಲು ನ್ಯಾಯಮೂರ್ತಿ ಆರೀಪ್ ಡಾಕ್ಟರ್ ಅವರ ಪೀಠವು ಯೂಟ್ಯೂಬರ್‌ಗಳಿಗೆ ಆದೇಶಿಸಿದೆ.
ಇನ್ನು ಮುಂದೆ, ಗಿರೀಶ್ ಮಹಾಜನ್ ಅವರಿಗೆ ಮಾನಹಾನಿ ಮಾಡುವಂತಹ ರೀತಿಯ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಆದೇಶಿಸಿದೆ.
ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು, ತಮ್ಮ ವಿರುದ್ಧ ನಕಲಿ ಹಾಗೂ ಮಾನಹಾನಿಯಾಗುವ ರೀತಿಯ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಅನಿಲ್ ತಾಠೆ ಹಾಗೂ ಶ್ಯಾಮ್ ಗಿರಿ ಎಂಬ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಗಿರೀಶ್ ಮಹಾಜನ್ ಕುರಿತಾದ ಐದು ವಿಡಿಯೊಗಳನ್ನು 'ಅನಿಲ್ ಗಂಗಾಬೇಡಿ ತಾಠೆ' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ರಕರ್ತ ಹಾಗೂ ಯೂಟ್ಯೂಬರ್ ಅನಿಲ್ ತಾಠೆ ಅವರು ಹಾಕಿದ್ದರು. ಇನ್ನೊಂದು ವಿಡಿಯೊವನ್ನು ಶ್ಯಾಮ್ ಗಿರಿ ಎನ್ನುವ ಯೂಟ್ಯೂಬರ್, ' ಮುದ್ದ ಭಾರತ್ ಕಾ' ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊಗಳನ್ನು ಅಳಿಸಿ ಹಾಕಲು ಸೂಚಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಪ್ರಕರಣದ ಕುರಿತಾದ ಮುಂದಿನ ವಿಚಾರಣೆಯು ಜೂನ್ 20ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.