ADVERTISEMENT

ಧ್ವನಿವರ್ಧಕ ಪ್ರಕರಣ | ಸರ್ಕಾರದ ವಿರುದ್ಧ ಕ್ರಮದ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್‌

ಪಿಟಿಐ
Published 8 ಜುಲೈ 2025, 14:40 IST
Last Updated 8 ಜುಲೈ 2025, 14:40 IST
ಧ್ವನಿವರ್ಧಕ
ಧ್ವನಿವರ್ಧಕ   

ಮುಂಬೈ: ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ಧ್ವನಿವರ್ಧಕಗಳನ್ನು ಅಳವಡಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಅಂಥವುಗಳನ್ನು ತೆರವುಗೊಳಿಸುವಲ್ಲಿ ಮಹಾರಾಷ್ಟ್ರ ಸರ್ಕಾರವು ಕಟ್ಟುನಿಟ್ಟಿನ ಪ್ರಯತ್ನಗಳನ್ನು ಮಾಡಿದೆ. ಹೀಗಾಗಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಶಬ್ದಮಾಲಿನ್ಯ ತಡೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ಅಕ್ರಮ ಧ್ವನಿವರ್ಧಕಗಳ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ 2016ರಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಪಾಲಿಸಿಲ್ಲ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತ ಸಂತೋಷ್‌ ಪಚಲಗ್‌ ಎಂಬವರು 2018ರಲ್ಲಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಅಲೋಕ್‌ ಅರಾಧೆ ಹಾಗೂ ನ್ಯಾಯಮೂರ್ತಿ ಸಂದೀಪ್‌ ಮಾರ್ನೆ ಅವರನ್ನೊಳಗೊಂಡ ಪೀಠವು ಮಂಗಳವಾರ ಆ ಅರ್ಜಿಯನ್ನು ಇತ್ಯರ್ಥಗೊಳಿಸಿದೆ. ಮಹಾರಾಷ್ಟ್ರ ಪೊಲೀಸ್‌ ಮಹಾನಿರ್ದೇಶಕರಾದ ರಶ್ಮಿ ಶುಕ್ಲಾ ಅವರು ಇತ್ತೀಚೆಗಷ್ಟೇ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನ್ಯಾಯಪೀಠ ಪರಿಗಣಿಸಿದೆ. 

ADVERTISEMENT

‘ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ ಅಂಶಗಳನ್ನು ಗಮನಿಸಿದ್ದೇವೆ. ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದ್ದು, 2016ರ ನಿರ್ದೇಶನದ ಉಲ್ಲಂಘನೆಯೂ ಕಂಡುಬಂದಿಲ್ಲದೇ ಇರುವುದರಿಂದ ಕಾನೂನು ನಿಂದನೆ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ವರೆಗೆ 2,812 ಧ್ವನಿವರ್ಧಕಗಳು ಬಳಕೆಯಲ್ಲಿದ್ದವು. ಈ ಪೈಕಿ 343 ಧ್ವನಿವರ್ಧಕಗಳನ್ನು ತೆರವುಗೊಳಿಸಿ, 831 ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿಲಾಗಿದೆ. 767 ಧಾರ್ಮಿಕ ಸ್ಥಳಗಳಿಗೆ ಧ್ವನಿ ಹೆಚ್ಚಿಸದಂತೆ ನೋಟಿಸ್‌ ಜಾರಿಗೊಳಿಸಿ, 19 ಪ್ರಕಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.