ADVERTISEMENT

ಪತ್ರಕರ್ತ ಗೋಸ್ವಾಮಿ ವಿರುದ್ಧದ ಎರಡು ಎಫ್‌ಐಆರ್‌ ಅಮಾನತು: ಬಾಂಬೆ ಹೈಕೋರ್ಟ್‌ ಆದೇಶ

ಪಿಟಿಐ
Published 30 ಜೂನ್ 2020, 11:27 IST
Last Updated 30 ಜೂನ್ 2020, 11:27 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ರಿಪಬ್ಲಿಕ್‌ ಟಿ.ವಿ ವಾಹಿನಿ ಮುಖ್ಯ ಸಂಪಾದಕ ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ಬಾಂಬೆ ಹೈಕೋರ್ಟ್‌ ಮಂಗಳವಾರ ಅಮಾನತುಗೊಳಿಸಿ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಉಜ್ಜಲ್‌ ಭೂಯಾನ್‌ ಮತ್ತು ರಿಯಾಜ್‌ ಚಗ್ಲಾ ಅವರಿರುವ ನ್ಯಾಯಪೀಠ, ‘ಗೋಸ್ವಾಮಿ ಅವರಿಂದ ಅಪರಾಧ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹಿಂಸೆ, ಸಾರ್ವಜನಿಕ ಸೌಹಾರ್ದಕ್ಕೆ ಧಕ್ಕೆ ತರುವ ಉದ್ದೇಶವೂ ಅವರದ್ದಾಗಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ‘ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿಯ ವಿಚಾರಣೆ ಪೂರ್ಣ ನಡೆದು, ವಿಲೇವಾರಿ ಆಗುವವರೆಗೆ ಗೋಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದೂ ನ್ಯಾಯಪೀಠ ಪೊಲೀಸರಿಗೆ ನಿರ್ದೇಶಿಸಿದೆ.

ADVERTISEMENT

ಪಾಲ್ಘರ್‌ನಲ್ಲಿ ಇಬ್ಬರು ಸಾಧುಗಳ ಹತ್ಯೆ ಕುರಿತು ರಿಪಬ್ಲಿಕ್‌ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಗೋಸ್ವಾಮಿ ಅವರು ಕೋಮು ಭಾವನೆ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ನಾಗಪುರದಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮತ್ತೊಂದು ಎಫ್‌ಐಆರ್‌ ಮುಂಬೈನಲ್ಲಿ ದಾಖಲಾಗಿದೆ. ಬಾಂದ್ರಾ ರೈಲು ನಿಲ್ದಾಣದ ಬಳಿ ವಲಸೆ ಕಾರ್ಮಿಕರುಜಮಾಯಿಸಿದ್ದ ಘಟನೆಗೆ ಸಂಬಂಧಿಸಿದಂತೆ ಗೋಸ್ವಾಮಿ ಒಂದು ಕೋಮಿನ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪ ಇದೆ.

ಗೋಸ್ವಾಮಿ ಪರ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದ ಮಂಡಿಸಿದರೆ, ಕಪಿಲ್‌ ಸಿಬಲ್‌ ಹಾಗೂ ರಾಜಾ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.