ADVERTISEMENT

ಗಡಿ ವಿವಾದ: ಮಾನವೀಯತೆಗೆ ಸಂಬಂಧಿಸಿದ ವಿಷಯ –ಉದ್ಧವ್ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 12:52 IST
Last Updated 26 ಡಿಸೆಂಬರ್ 2022, 12:52 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ನಾಗಪುರ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದವುಳ್ಳ ಪ್ರದೇಶಗಳನ್ನು ಒಟ್ಟಾಗಿಸಿ ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

ಗಡಿ ವಿವಾದ ಕುರಿತು ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ‘ಇದು ಕೇವಲ ಭಾಷೆ ಅಥವಾ ಗಡಿಗೆ ಸಂಬಂಧಿಸಿದ್ದಲ್ಲ, ಮಾನವೀಯತೆಗೆ ಸಂಬಂಧಿಸಿದ ವಿಷಯವಾಗಿದೆ’ ಎಂದು ಪ್ರತಿಪಾದಿಸಿದರು.

ಗಡಿ ಗ್ರಾಮಗಳಲ್ಲಿ ಮರಾಠಿಗರು ತಲೆತಲಾಂತರದಿಂದ ವಾಸಿಸುತ್ತಿದ್ದು ಅವರ ಭಾಷೆ, ಜೀವನಶೈಲಿ ಮರಾಠಿಯದ್ದಾಗಿದೆ. ಈಗ ವಿಷಯ ಸುಪ್ರೀಂಕೋರ್ಟ್‌ನಲ್ಲಿರುವ ಕಾರಣ ಸದ್ಯ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಗಡಿ ವಿವಾದ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ಸರ್ಕಾರ ವಾತಾವರಣ ಹಾಳುಗೆಡವುತ್ತಿದೆ ಎಂದು ಪರೋಕ್ಷವಾಗಿ ಟೀಕಿಸಿದರು.

ಮಹಾರಾಷ್ಟ್ರದ ಜೊತೆಗೆ ವಿಲೀನಗೊಳಿಸಿ ಎಂದು ಬೆಳಗಾವಿ ಮಹಾನಗರಪಾಲಿಕೆ ನಿರ್ಣಯ ಅಂಗೀಕರಿಸಿದರೆ ಅದರ ವಿರುದ್ಧವೇ ಕ್ರಮಜರುಗಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜ್ಯದ ರಕ್ಷಣೆಗೆ ಬರಬೇಕು. ವಿಧಾನಮಂಡಲದ ಸದಸ್ಯರು ‘ಕೇಸ್ ಫಾರ್ ಜಸ್ಟೀಸ್‌’ ಸಿನಿಮಾ ವೀಕ್ಷಿಸಬೇಕು ಮತ್ತು ಮಹಾಜನ್ ವರದಿಯನ್ನು ಓದಬೇಕು ಎಂದು ಸಲಹೆ ಮಾಡಿದರು.

ಮಹಾರಾಷ್ಟ್ರಗಡಿಯ ಕೆಲ ಗ್ರಾಮ ಪಂಚಾಯಿತಿಗಳೂ ತೆಲಂಗಾಣ ಜೊತೆ ವಿಲೀನಗೊಳಿಸಲು ಕೋರಿ ನಿರ್ಣಯ ಅಂಗೀಕರಿಸಿವೆ. ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಅವುಗಳ ವಿರುದ್ಧ ಕ್ರಮಜರುಗಿಸುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯಸಭೆ ಸದಸ್ಯ, ಶಿವಸೇನೆ (ಠಾಕ್ರೆ ಬಣ) ಮುಖಂಡ ಸಂಜಯ್‌ ರಾವುತ್‌ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿದರು.

‘ಪ್ರತಿ ಇಂಚೂ ಭೂಮಿಗೆ ಹೋರಾಟ’

ನಾಗ್ಪುರ (ಪಿಟಿಐ): ‘ಮಹಾರಾಷ್ಟ್ರ ಸರ್ಕಾರ ರಾಜ್ಯದ ಪಾಲಿನ ಪ್ರತಿ ಇಂಚು ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.

ಗಡಿ ವಿವಾದ ವಿಷಯ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಲು ಏನು ಮಾಡಬೇಕೋ, ಅದೆಲ್ಲವನ್ನೂ ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಜಿತ್‌ ಪವಾರ್, ಕಲಾಪ ಸಲಹಾ ಸಮಿತಿಯಲ್ಲಿ ತೀರ್ಮಾನವಾದಂತೆ ಗಡಿ ವಿವಾದ ಕುರಿತು ನಿರ್ಣಯವನ್ನು ಮಂಡಿಸದ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಗಡಿ ವಿಷಯ ಕುರಿತು ಕರ್ನಾಟಕ ಮುಖ್ಯಮಂತ್ರಿ ನೀಡಿರುವ ಹೇಳಿಕೆಗಳಿಂದ ಮರಾಠಿಗರ ಭಾವನೆಗಳಿಗೆ ನೋವಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಪೃಥ್ವಿರಾಜ ಚೌಹಾಣ್‌ ಅವರು, ಕರ್ನಾಟಕ ಮುಖ್ಯಮಂತ್ರಿ ಗಡಿ ವಿಷಯ ಕುರಿತು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಗಡಿ ವಿಷಯ ಕುರಿತು ಕರ್ನಾಟಕ ವಿಧಾನಸಭೆಯು ಕಳೆದ ಗುರುವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿತ್ತು. ಗಡಿ ವಿಷಯ ಮುಗಿದ ಅಧ್ಯಾಯ. ಈಗಿನ ವಿವಾದ ಮಹಾರಾಷ್ಟ್ರ ಸರ್ಕಾರದ ಸೃಷ್ಟಿ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.