ಅಸಾದುದ್ದೀನ್ ಓವೈಸಿ
(ಪಿಟಿಐ ಚಿತ್ರ)
ಹೈದರಾಬಾದ್: 'ನಮ್ಮ ಬಳಿ ಬ್ರಹ್ಮೋಸ್ ಕ್ಷಿಪಣಿಗಳಿವೆ. ಪಾಕಿಸ್ತಾನದ ಬೆದರಿಕೆಗೆ ಬಗ್ಗುವುದಿಲ್ಲ' ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಎಚ್ಚರಿಕೆ ನೀಡಿದ್ದಾರೆ.
ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಓವೈಸಿ, 'ನಮ್ಮ ಬಳಿ ಬ್ರಹ್ಮೋಸ್ ಇವೆ. ಇಂತಹ ಅಸಂಬದ್ಧ ಮಾತುಗಳನ್ನು ಆಡಬಾರದು' ಎಂದಿದ್ದಾರೆ.
ಓವೈಸಿ ಪ್ರತಿಕ್ರಿಯೆ ವಿಡಿಯೊವನ್ನು ಸುದ್ದಿಸಂಸ್ಥೆ 'ಎಎನ್‌ಐ' ಬಿಡುಗಡೆ ಮಾಡಿದೆ.
'ಇಂತಹ ಬೆದರಿಕೆಗಳು ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ. ಹಾಗಿರುವಾಗ ಬೆದರಿಕೆ ಮೂಲಕ ಭಾರತದ ಮೇಲೆ ಏನೂ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಬಳಿಕ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಉಗ್ರರ ನೆಲೆಯನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು.
ಇದೀಗಷ್ಟೇ ಅಮೆರಿಕ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್, ಭಾರತದ ಮೇಲೆ ಅಣ್ವಸ್ತ್ರ ಬಳಕೆ ಮಾಡುವ ಬೆದರಿಕೆಯೊಡ್ಡಿದ್ದರು. ಆದರೆ ಪಾಕ್ ಬೆದರಿಕೆಗೆ ಮಣಿಯುವುದಿಲ್ಲ ಎಂದು ಭಾರತ ತಿರುಗೇಟು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.