ADVERTISEMENT

ಪಾಕ್‌ನ ಪ್ರತಿ ಮೂಲೆಯೂ ಬ್ರಹ್ಮೋಸ್‌ ಕ್ಷಿಪಣಿ ವ್ಯಾಪ್ತಿಯಲ್ಲಿದೆ: ರಾಜನಾಥ್ ಸಿಂಗ್

ಪಿಟಿಐ
Published 18 ಅಕ್ಟೋಬರ್ 2025, 9:33 IST
Last Updated 18 ಅಕ್ಟೋಬರ್ 2025, 9:33 IST
<div class="paragraphs"><p>ಸಚಿವ ರಾಜನಾಥ ಸಿಂಗ್</p></div>

ಸಚಿವ ರಾಜನಾಥ ಸಿಂಗ್

   

ಪಿಟಿಐ ಚಿತ್ರ

ಲಖನೌ: ‘ಭಾರತದ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನದ ಮೂಲೆಮೂಲೆಯನ್ನೂ ತಲುಪುವ ಸಾಮರ್ಥ್ಯ ಹೊಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಶನಿವಾರ ಹೇಳಿದರು.

ADVERTISEMENT

‘ಭಾರತದ ಸೇನೆ ಈಚೆಗೆ ನಡೆಸಿದ ಸಿಂಧೂರ ಕಾರ್ಯಾಚರಣೆಯು ‘ಟ್ರೇಲರ್‌’ ಆಗಿತ್ತು. ಗೆಲುವು ಸಾಧಿಸುವುದು ಭಾರತಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂಬುದನ್ನು ಈ ಕಾರ್ಯಾಚರಣೆ ಸಾಬೀತುಪಡಿಸಿದೆ’ ಎನ್ನುವ ಮೂಲಕ ಅವರು ನೆರೆಯ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು.

ರಾಜನಾಥ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಇಲ್ಲಿನ ಸರೋಜಿನಿ ನಗರದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಲಾದ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಅನ್ನು ಉದ್ಘಾಟಿಸಿದರು.

‘ಪಾಕಿಸ್ತಾನದ ಇಂಚಿಂಚೂ ನೆಲವನ್ನೂ ತಲುಪುವ ಸಾಮರ್ಥ್ಯವನ್ನು ಬ್ರಹ್ಮೋಸ್‌ ಹೊಂದಿದೆ. ಪಾಕಿಸ್ತಾನ ಎಂಬ ದೇಶವನ್ನು ಸೃಷ್ಟಿಸಲು ಭಾರತಕ್ಕೆ ಸಾಧ್ಯವಾದರೆ, ಸಮಯ ಬಂದಾಗ ಆ ದೇಶವನ್ನು...’ ಎನ್ನುತ್ತಾ ಮಾತು ಅರ್ಧಕ್ಕೆ ನಿಲ್ಲಿಸಿದರು. ಆ ಬಳಿಕ ಮುಂದುವರಿಸಿ, ‘ಆ ಬಗ್ಗೆ ನಾನು ಹೆಚ್ಚು ಹೇಳಬೇಕಾಗಿಲ್ಲ. ನೀವೆಲ್ಲರೂ ಸಾಕಷ್ಟು ಬುದ್ಧಿವಂತರಿದ್ದೀರಿ’ ಎಂದು ಹೇಳಿದರು.

ಆಪರೇಷನ್ ಸಿಂಧೂರದ ಯಶಸ್ಸನ್ನು ಶ್ಲಾಘಿಸಿದ ಸಿಂಗ್, ‘ಈ ಕಾರ್ಯಾಚರಣೆಯು ಭಾರತೀಯರಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ ಮತ್ತು ಬ್ರಹ್ಮೋಸ್‌ನ ಶಕ್ತಿಯನ್ನು ಜಗತ್ತಿನ ಮುಂದೆ ಸಾಬೀತುಪಡಿಸಿದೆ’ ಎಂದರು. 

‘ಅದೇ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಇಡೀ ಜಗತ್ತು ಈಗ ಭಾರತದ ಸೇನೆಯ ಸಾಮರ್ಥ್ಯವನ್ನು ಗುರುತಿಸುತ್ತದೆ. ಭಾರತವು ತನ್ನ ಕನಸುಗಳನ್ನು ನನಸಾಗಿಸಬಹುದು ಎಂಬ ನಮ್ಮ ನಂಬಿಕೆಗೆ ಬ್ರಹ್ಮೋಸ್ ಬಲ ನೀಡಿದೆ’ ಎಂದು ಹೇಳಿದರು.

ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಭಾರತದ ಸೇನೆ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನದ ಗುರಿಗಳನ್ನು ಧ್ವಂಸಗೊಳಿಸಲು ಸ್ವದೇಶಿ ನಿರ್ಮಿತ ಬ್ರಹ್ಮೋಸ್‌ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಬಳಸಲಾಗಿತ್ತು.

‘ಬ್ರಹ್ಮೋಸ್ ಕ್ಷಿಪಣಿಗಳ ಯಶಸ್ವಿ ತಯಾರಿಕೆಯು ಒಂದು ಕಾಲದಲ್ಲಿ ಕನಸು ಎಂದು ಭಾವಿಸಿದ್ದು ಈಗ ನನಸಾಗಿದೆ ಎಂಬುದನ್ನು ತೋರಿಸುತ್ತದೆ. ಈ ಯೋಜನೆಯು ತಾಳ್ಮೆ, ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಪ್ರತಿನಿಧಿಸುತ್ತದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಆದಿತ್ಯನಾಥ ಅವರು, ‘ಇದು ಉತ್ತರ ಪ್ರದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಈ ಸಾಧನೆಯ ಹಿಂದಿದೆ’ ಎಂದರು.

ಪ್ರಮುಖ ಅಂಶಗಳು

* ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿಗಳಿಗೆ ಹಸಿರು ನಿಶಾನೆ ತೋರಿದ ರಕ್ಷಣಾ ಸಚಿವ

* ಬ್ರಹ್ಮೋಸ್‌ ಏರೋಸ್ಪೇಸ್‌ನ ಅತ್ಯಾಧುನಿಕ ಘಟಕದಲ್ಲಿ ತಯಾರಾದ ಕ್ಷಿಪಣಿ

* ಉತ್ತರ ಪ್ರದೇಶದ ಸರೋಜಿನಿ ನಗರದಲ್ಲಿ ಇದೇ ವರ್ಷ ಮೇ 11ರಂದು ಕಾರ್ಯಾರಂಭ ಮಾಡಿರುವ ಘಟಕ

ಬ್ರಹ್ಮೋಸ್ ಕೇವಲ ಕ್ಷಿಪಣಿಯಲ್ಲ. ಇದು ಭಾರತದ ಹೆಚ್ಚುತ್ತಿರುವ ಶಕ್ತಿಯ ಸಂಕೇತ. ಭೂಸೇನೆ ನೌಕಾಪಡೆ ಮತ್ತು ವಾಯುಪಡೆಯ ಪ್ರಮುಖ ಆಧಾರಸ್ತಂಭವಾಗಿದೆ
ರಾಜನಾಥ ಸಿಂಗ್ ರಕ್ಷಣಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.