ADVERTISEMENT

ರಾಜಸ್ಥಾನ: ಮಿದುಳು ನಿಷ್ಕ್ರಿಯ ವ್ಯಕ್ತಿಯ ಅಂಗಾಂಗ ಏರ್‌ಲಿಫ್ಟ್; 6 ಜನರಿಗೆ ಜೀವದಾನ

ಪಿಟಿಐ
Published 15 ಡಿಸೆಂಬರ್ 2024, 9:51 IST
Last Updated 15 ಡಿಸೆಂಬರ್ 2024, 9:51 IST
   

ಜೈಪುರ: ಮಿದುಳು ನಿಷ್ಕ್ರಿಯ ವ್ಯಕ್ತಿಯ ಪ್ರಮುಖ ಅಂಗಗಳನ್ನು ಜಲವಾರ್‌ ಜಿಲ್ಲೆಯ ಆಸ್ಪತ್ರೆಯಿಂದ ಜೈಪುರ ಮತ್ತು ಜೋಧ್‌ಪುರಕ್ಕೆ ಭಾನುವಾರ ಏರ್‌ಲಿಫ್ಟ್‌ ಮಾಡಲಾಗಿದ್ದು, ಆರು ಜನರಿಗೆ ಮರುಜೀವ ದೊರೆಯುತ್ತಿದೆ. ಈ ಮೂಲಕ ರಾಜಸ್ಥಾನ ಅಂಗಾಂಗ ಕಸಿ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಕಸಿ ಶಸ್ತ್ರಚಿಕಿತ್ಸೆಗಾಗಿ ಇದೇ ಮೊದಲ ಬಾರಿಗೆ ಜೈಪುರ ಮತ್ತು ಜೋಧ್‌ಪುರಕ್ಕೆ ಹೆಲಿಕಾಪ್ಟರ್‌ ಮೂಲಕ ಪ್ರಮುಖ ಅಂಗಗಳನ್ನು ಸಾಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಮೂತ್ರಪಿಂಡ, ಎರಡು ಶ್ವಾಸಕೋಶ ಮತ್ತು ಹೃದಯವನ್ನು ಜೈಪುರಕ್ಕೆ, ಮತ್ತೊಂದು ಮೂತ್ರಪಿಂಡ ಮತ್ತು ಯಕೃತ್ತನ್ನು ಏಮ್ಸ್ ಜೋಧಪುರಕ್ಕೆ ಕಳುಹಿಸಲಾಗಿದೆ ಎಂದು ಸವಾಯಿ ಮ್ಯಾನ್ ಸಿಂಗ್ ಆಸ್ಪತ್ರೆಯ ಅಧೀಕ್ಷಕ ಡಾ. ದೀಪಕ್ ಮಹೇಶ್ವರಿ ಹೇಳಿದ್ದಾರೆ.

ADVERTISEMENT

ರಾಜಸ್ಥಾನದ ಜಲಾವರ್‌ ಜಿಲ್ಲೆಯ ಮನ್ಪುರ ಪಿಪಾಜಿ ಎನ್ನುವ ಪ್ರದೇಶದಲ್ಲಿ ಡಿ.10 ನಡೆದ ಗಲಾಟೆಯಲ್ಲಿ ವಿಷ್ಣು ಪ್ರಸಾದ್‌ (33) ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಡಿ.12ರಂದು ಅವರ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದರು. ಬಳಿಕ ಕುಟುಂಬ ಅಂಗಾಂಗ ದಾನಕ್ಕೆ ಮುಂದಾದ ಕಾರಣ ಅಗತ್ಯವಿರುವ ಹಲವರಿಗೆ ಅಂಗಾಂಗ ಕಸಿ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.