ADVERTISEMENT

ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜೆಎನ್‌ಯು

ಪಿಟಿಐ
Published 2 ಮಾರ್ಚ್ 2024, 3:12 IST
Last Updated 2 ಮಾರ್ಚ್ 2024, 3:12 IST
<div class="paragraphs"><p>ಜೆಎನ್‌ಯು ಲಾಂಛನ</p></div>

ಜೆಎನ್‌ಯು ಲಾಂಛನ

   

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗುರುವಾರ ತಡರಾತ್ರಿ ನಡೆದ ಘರ್ಷಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿವಿಯ ಉಪಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಅವರು, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಾತನಾಡಿರುವ ಅವರು, 'ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಚುನಾವಣೆಯನ್ನು ವಿದ್ಯಾರ್ಥಿಗಳೇ ನಡೆಸುತ್ತಾರೆ. ಶಾಂತಿಯುತ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸುವುದು ಅವರ ಜವಾಬ್ದಾರಿ. ಅಂತರ ಹಾಸ್ಟೆಲ್‌ ಆಡಳಿತ (ಎಎಚ್‌ಎ) ಚುನಾವಣೆ ಮೇಲ್ವಿಚಾರಣೆ ನಡೆಸುತ್ತದೆ. ಘರ್ಷಣೆ ಬಗ್ಗೆ ವಿದ್ಯಾರ್ಥಿಗಳಿಂದ ದೂರುಗಳು ಬಂದರೆ, ಎಎಚ್‌ಎ ಗಮನಹರಿಸಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.

ADVERTISEMENT

ಗಾಯಾಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವೈದ್ಯಕೀಯ ಹಾಗೂ ಕಾನೂನು ವರದಿ ಬಂದ ನಂತರ, ವಿವಿಯ ಆಡಳಿತ ತನ್ನದೇ ವರದಿ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ವಿವಿಯ ಆವರಣದಲ್ಲಿ ಯಾವುದೇ ರೀತಿಯ ಹಿಂಸಾಕೃತ್ಯಗಳು ನಡೆದರೆ ವಿದ್ಯಾರ್ಥಿ ಸಂಘಟನೆಯ ಚುನಾವಣೆಯನ್ನು ಮುಂದೂಡಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಚುನಾವಣಾ ಸಮಿತಿ ಸದಸ್ಯರ ಆಯ್ಕೆ ವಿಚಾರವಾಗಿ ಗುರುವಾರ ರಾತ್ರಿ ನಡೆದ ಸಭೆ ವೇಳೆ ವಿವಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಎರಡೂ ಗುಂಪಿನವರು ಪರಸ್ಪರ ಆರೋಪಗಳನ್ನು ಮಾಡಿ, ನಿಂದಿಸಿದ್ದರಿಂದ ಘರ್ಷಣೆ ಹೊಡೆದಾಟವಾಗಿತ್ತು.

ಈ ಸಂಬಂಧ ವಿದ್ಯಾರ್ಥಿಗಳಿಂದ ಇಲ್ಲಿನ ವಸಂತ್‌ ಕುಂಜ್‌ ಉತ್ತರ ಠಾಣೆಯಲ್ಲಿ 6 ದೂರುಗಳು ದಾಖಲಾಗಿವೆ.

'ವಿವಿಯ ಆವರಣದಲ್ಲಿ ಹೊಡೆದಾಟ ನಡೆಯುತ್ತಿರುವ ವಿಷಯ ರಾತ್ರಿ 1.15ರ ಸುಮಾರಿಗೆ ನಮಗೆ ತಿಳಿಯಿತು. ಘಟನೆ ವೇಳೆ ಕನಿಷ್ಠ 4 ಮಂದಿ ಗಾಯಗೊಂಡಿದ್ದಾರೆ. ಎರಡೂ ಕಡೆಯವರಿಂದ ಹಲವು ದೂರುಗಳು ಬಂದಿವೆ. ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ ಕೆಲವರು, ಚಿಕಿತ್ಸೆ ಬಳಿಕ ಹಿಂದಿರುಗಿದ್ದಾರೆ ಎಂದು ವಿವಿಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಪ್ರಕರಣಗಳು ಪುನರಾವರ್ತನೆಗೊಳ್ಳುತ್ತಿವೆ ಎಂದು ಆರೋಪಿಸಿರುವ ಎಡ ಪಂಥೀಯ ವಿದ್ಯಾರ್ಥಿಗಳು, ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.