ಹೂಗ್ಲಿ (ಪಶ್ಚಿಮ ಬಂಗಾಳ): ’ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆ ದಾಟಿದ ಕಾರಣಕ್ಕೆ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೆ ಒಳಗಾಗಿರುವ ಬಿಎಸ್ಎಫ್ ಯೋಧ ಪೂರ್ಣಂ ಸಾಹು ಆಗಮನಕ್ಕಾಗಿ ಇಡೀ ಕುಟುಂಬ ಕಾತರದಿಂದ ಕಾಯುತ್ತಿದೆ’ ಎಂದು ಅವರ ತಂದೆ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಷ್ರಾದ ಬಳಿ ನೆಲೆಸಿರುವ ಪೂರ್ಣಂ ಸಾಹು ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದ್ದು, ತಮ್ಮ ಮಗ ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಯೋಧ ಪಿ.ಕೆ. ಸಾಹು ಅವರ ತಂದೆ ಭೋಲನಾಥ್ ಸಾಹು, ‘ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ಮಗ ಸುರಕ್ಷಿತವಾಗಿದ್ದಾನೊ ಅಥವಾ ಇಲ್ಲವೊ ಎಂಬುದು ಗೊತ್ತಿಲ್ಲ. ಆತ ಈಗ ಪಾಕಿಸ್ತಾನದ ವಶದಲ್ಲಿದ್ದಾನೆ ಎಂದು ಕೇಳಲ್ಪಟ್ಟಿದ್ದೇವೆ. ನನ್ನ ಮಗ ಈಗ ಎಲ್ಲಿದ್ದಾನೆ ಮತ್ತು ಆತ ಸುರಕ್ಷಿತವಾಗಿದ್ದಾನೆಯೇ ಎಂಬುದನ್ನು ತಿಳಿಯಲು ಇಚ್ಚಿಸುತ್ತೇನೆ’ ಎಂದು ಹೇಳಿದರು.
ಸಾಹು ಬಿಡುಗಡೆಗಾಗಿ ಪಾಕಿಸ್ತಾನ ಮತ್ತು ಭಾರತದ ಗಡಿ ಭದ್ರತಾ ಪಡೆಗಳ ನಡುವೆ ಮಾತುಕತೆ ನಡೆದಿದೆ ಎಂದು ಅಧಿಕಾರಿಗಳು ಗುರುವಾರ ರಾತ್ರಿ ತಿಳಿಸಿದ್ದಾರೆ. ಆದರೆ, ಆ ಬಳಿಕ ಯಾವುದೇ ಬೆಳವಣಿಗೆಗಳ ಬಗ್ಗೆ ಗೊತ್ತಾಗಿಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ಮಗನ ರಕ್ಷಣೆ ಮತ್ತು ಆತನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.
ಬಿಎಸ್ಎಫ್‌ನ 182ನೇ ಬೆಟಾಲಿಯನ್‌ನಲ್ಲಿದ್ದ ಪೂರ್ಣಂ ಸಾಹು ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಸೇನಾ ಸಮವಸ್ತ್ರ ಧರಿಸಿದ್ದ ಅವರು ರೈಫಲ್ ಹಿಡಿದು ಅಂತರರಾಷ್ಟ್ರೀಯ ಗಡಿ ರೇಖೆಯ ಬಳಿ ರೈತರಿಗೆ ಭದ್ರತೆ ಒದಗಿಸಿದ್ದರು. ಈ ವೇಳೆ ಯೋಧ ಆಕಸ್ಮಿಕವಾಗಿ ಆಗಿ ಅಂತರರಾಷ್ಟ್ರೀಯ ಗಡಿ ರೇಖೆ ದಾಟಿದ್ದರು. ಆಗ ಪಾಕಿಸ್ತಾನದ ಯೋಧರು, ಸಾಹು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.