ADVERTISEMENT

ಬಿಆರ್‌ಎಸ್‌ ನಾಯಕಿ ಕವಿತಾ ಉಪವಾಸ ಸತ್ಯಾಗ್ರಹ

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಆಗ್ರಹ

ಪಿಟಿಐ
Published 10 ಮಾರ್ಚ್ 2023, 15:23 IST
Last Updated 10 ಮಾರ್ಚ್ 2023, 15:23 IST
ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ದೆಹಲಿಯ ಜಂತರ್‌ ಮಂತರ್‌ನಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು –ಪಿಟಿಐ ಚಿತ್ರ
ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ದೆಹಲಿಯ ಜಂತರ್‌ ಮಂತರ್‌ನಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಮಾರ್ಚ್‌ 13ರಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ. ಕವಿತಾ ಅವರು ಶುಕ್ರವಾರ ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಅಬಕಾರಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನಾ ದಿನ ಕವಿತಾ ಅವರು ಸತ್ಯಾಗ್ರಹ ನಡೆಸಿದ್ದಾರೆ.

‘ಜಗತ್ತು ಅಭಿವೃದ್ಧಿ ಹೊಂದುತ್ತಿರುವ ವೇಗದಲ್ಲಿ ಭಾರತ ಕೂಡ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುವ ಅಗತ್ಯ ಇದೆ’ ಎಂದು ಕವಿತಾ ಅವರು ಪ್ರತಿಪಾದಿಸಿದರು.

ADVERTISEMENT

ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಆರು ಗಂಟೆಗಳ ಸತ್ಯಾಗ್ರಹವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಉದ್ಘಾಟಿಸಿದರು.

‘ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಅವಕಾಶಗಳನ್ನು ನೀಡಲು ಈ ಮಸೂದೆಯನ್ನು ಅಂಗೀಕರಿಸುವ ಅಗತ್ಯ ಇದೆ. ಕವಿತಾ ಅವರಿಗೆ ಬೆಂಬಲ ಸೂಚಿಸಿ ನಾವೂ ಪಾಲ್ಗೊಂಡಿದ್ದೇವೆ’ ಎಂದು ಅವರು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿ ಸಂಸತ್ ಪ್ರವೇಶಿಸಿದಾಗ ಮಹಿಳಾ ಮೀಸಲಾತಿ ಮಸೂದೆ ನಮ್ಮ ಆದ್ಯತೆ ಎಂದಿದ್ದರು. ಒಂಬತ್ತು ವರ್ಷಗಳಾದರೂ ಈ ಮಸೂದೆಯನ್ನು ಸಂಸತ್ತಿನಲ್ಲಿ ಮತ್ತೆ ಮಂಡಿಸಿಲ್ಲ’ ಎಂದೂ ಯೆಚೂರಿ ಅವರು ತಿಳಿಸಿದ್ದಾರೆ.

ಆರ್‌ಜೆಡಿಯ ಶ್ಯಾಮ್‌ ರಜಕ್‌, ಎಸ್‌ಪಿಯ ಸೀಮಾ ಶುಕ್ಲಾ, ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದಿರಾ ರೆಡ್ಡಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್‌ ಸೇರಿದಂತೆ ಸುಮಾರು ಹತ್ತು ಪಕ್ಷಗಳ ಮುಖಂಡರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ನಿಲುವು ಪ್ರಕಟಿಸಲಿ:

ಮಹಿಳಾ ಮೀಸಲಾತಿ ಮಸೂದೆ ಕುರಿತು ಬಿಜೆಪಿಯು ತನ್ನ ಸ್ಪಷ್ಟ ನಿಲುವು ಪ್ರಕಟಿಸಲಿ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಬೇಕು ಎಂದೂ ಒತ್ತಾಯಿಸಿದೆ. ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ಉಪವಾಸ ಸತ್ಯಾಗ್ರಹ ನಡೆಸಿದ ಬಳಿಕ ಕಾಂಗ್ರೆಸ್‌ ಈ ಬೇಡಿಕೆ ಮುಂದಿಟ್ಟಿದೆ.

‘ಕಾಂಗ್ರೆಸ್‌ ನಾಯಕತ್ವದ ಪ್ರಯತ್ನದಿಂದಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು 2010ರ ಮಾರ್ಚ್‌ 9ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ ಲೋಕಸಭೆಯಲ್ಲಿ ಅದಕ್ಕೆ ಬೆಂಬಲ ಸಿಕ್ಕಿಲ್ಲ. ಈ ಮಸೂದೆ ಇನ್ನೂ ಅಂಗೀಕಾರಕ್ಕೆ ಬಾಕಿ ಉಳಿದಿದೆ. ಅದನ್ನು ಪುನರುಜ್ಜೀವನಗೊಳಿಸುವುದನ್ನು ಯಾವುದು ತಡೆದಿದೆ?’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.