ADVERTISEMENT

ಭಾರತ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಎಡಪಕ್ಷಗಳ ಸಭೆ

ಪಿಟಿಐ
Published 18 ಜನವರಿ 2023, 11:05 IST
Last Updated 18 ಜನವರಿ 2023, 11:05 IST
   

ಹೈದರಾಬಾದ್ : 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಬುಧವಾರ ಕೆಲ ಎಡ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಇಲ್ಲಿನ ಖಮ್ಮಂ ಪಟ್ಟಣದಲ್ಲಿ ಬುಧವಾರ ನಡೆದ ಬಿಆರ್‌ಎಸ್ ಬಹಿರಂಗ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಕೇರಳ ಸಿಎಂ ಪಿಣರಾಯಿ ವಿಜಯನ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಸಿಪಿಐನ ಡಿ.ರಾಜಾ ಹಾಜರಿದ್ದರು.

ಕೆಸಿಆರ್ ಅವರ ರಾಷ್ಟ್ರೀಯ ರಾಜಕೀಯ ಪ್ರವೇಶವನ್ನು ಬೆಂಬಲಿಸುತ್ತಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕರ್ನಾಟಕದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಕಾರಣ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಎದುರಿಸಲು ಚಂದ್ರಶೇಖರ್‌ ರಾವ್‌ಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅಗತ್ಯವಿದೆ ಎಂದು ರಾಜಕೀಯ ವಿಶ್ಲೇಷಕ ತೆಲಕಪಲ್ಲಿ ರವಿ ಹೇಳಿದ್ದಾರೆ.

‘ನಾವು ಇದನ್ನು ಆರಂಭಿಕ ಸಾಧನೆ ಎಂದು ಕರೆಯಬಹುದು. ಬಿಆರ್‌ಎಸ್‌ನ ಕಾರ್ಯಕ್ಷೇತ್ರ ಮತ್ತು ಭದ್ರಕೋಟೆ ತೆಲಂಗಾಣ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಪಕ್ಷದ ಪ್ರಮುಖ ಗುರಿಯಾಗಿದೆ. ಇತರ ಪಕ್ಷಗಳ ಈ ಬೆಂಬಲ ಸಹಾಯಕ್ಕೆ ಬರಲಿದೆ’ ಎಂದು ರವಿ ತಿಳಿಸಿದರು.

ಈ ನಾಯಕರ ಉಪಸ್ಥಿತಿಯೊಂದಿಗೆ ಚಂದ್ರಶೇಖರ್‌ ರಾವ್‌ ತಮ್ಮ ರಾಷ್ಟ್ರೀಯ ರಾಜಕೀಯ ಪ್ರಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಖಮ್ಮಂ ಸಭೆಯಿಂದ ಬಿಜೆಪಿ ವಿರುದ್ಧದ ತಮ್ಮ ಹೋರಾಟವನ್ನು ಕೆಸಿಆರ್‌ ತೀವ್ರಗೊಳಿಸಲಿದ್ದಾರೆ. ಅಲ್ಲದೆ, ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಮಾಜಿ ಎಂಎಲ್‌ಸಿ ಮತ್ತು ರಾಜಕೀಯ ವಿಶ್ಲೇಷಕ ಪ್ರೊ.ಕೆ.ನಾಗೇಶ್ವರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.