ADVERTISEMENT

ಬಿಆರ್‌ಎಸ್‌ ಶಾಸಕರ ಖರೀದಿಗೆ ಯತ್ನ–ಸಿಬಿಐನಿಂದಲೇ ತನಿಖೆ: ಹೈಕೋರ್ಟ್

ಪಿಟಿಐ
Published 6 ಫೆಬ್ರುವರಿ 2023, 10:59 IST
Last Updated 6 ಫೆಬ್ರುವರಿ 2023, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್ : ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಶಾಸಕರ ಖರೀದಿ ಯತ್ನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಸೋಮವಾರ ಎತ್ತಿಹಿಡಿಯಿತು.

ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದ ತೆಲಂಗಾಣ ಸರ್ಕಾರದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾ ಮಾಡಿತು. ಇದರಿಂದ ತೆಲಂಗಾಣ ಸರ್ಕಾರಕ್ಕೆ ಹಿನ್ನಡೆಯಾಗಿದ್ದರೆ, ತನಿಖೆಯನ್ನು ಮುಂದುವರಿಸಲು ಸಿಬಿಐಗೆ ಹಾದಿ ಸುಗಮವಾದಂತಾಗಿದೆ.

ಬಿಆರ್‌ಎಸ್‌ನ ನಾಲ್ವರು ಶಾಸಕರನ್ನು ಬಿಜೆಪಿ ಪರವಾಗಿ ಖರೀದಿಸಲು ಆಮಿಷವೊಡ್ಡಲಾಗಿತ್ತು ಎಂಬ ಪ್ರಕರಣದ ತನಿಖೆಗೆ ತೆಲಂಗಾಣ ಸರ್ಕಾರ 2022ರ ನ. 9ರಂದು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು.

ADVERTISEMENT

ಎಸ್‌ಐಟಿ ರದ್ದುಪಡಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಆದೇಶಿಸಿತ್ತು. ತೆಲಂಗಾಣ ಸರ್ಕಾರ ಮತ್ತು ಇತರರು ಇದನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಉಜ್ಜಲ್‌ ಭುಯನ್‌ ಮತ್ತು ನ್ಯಾಯಮೂರ್ತಿ ಎನ್‌.ತುಕಾರಾಂಜೀ ಅವರಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿಯಿತು. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆಗುವಂತೆ ಆದೇಶವನ್ನು ಅಮಾನತಿನಲ್ಲಿ ಇಡಬೇಕು ಎಂಬ ಸರ್ಕಾರದ ಮನವಿಯನ್ನು ತಳ್ಳಿಹಾಕಿತು.

ಬಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಅವರು 2022ರ ಅಕ್ಟೋಬರ್ 26ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ರಾಮಚಂದ್ರ ಭಾರತಿ ಅಲಿಯಾಸ್‌ ಸತೀಶ್ ಶರ್ಮಾ, ನಂದು ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಬಿಆರ್‌ಎಸ್‌ನ ನಾಲ್ವರು ಶಾಸಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದರು ಎಂದು ದೂರಲಾಗಿದೆ.

ಟಿಆರ್‌ಎಸ್ ಶಾಸಕ ಸ್ಥಾನಕ್ಕೆ (ಈಗ ಬಿಆರ್‌ಎಸ್‌) ರಾಜೀನಾಮೆ ನೀಡಿ, ಮತ್ತೆ ಬಿಜೆಪಿ ಟಿಕೆಟ್‌ನಡಿ ವಿಧಾನಸಭೆಗೆ ಸ್ಪರ್ಧಿಸಲು ತಮಗೆ ₹ 100 ಕೋಟಿ ಆಮಿಷ ಒಡ್ಡಲಾಗಿತ್ತು ಎಂದು ರೋಹಿತ್ ರೆಡ್ಡಿ ಆರೋಪಿಸಿದ್ದರು. ಅಲ್ಲದೆ, ಇನ್ನು ಮೂವರು ಶಾಸಕರನ್ನು ಕರೆತರಬೇಕು. ಅವರಿಗೆ ತಲಾ ₹ 50 ಕೋಟಿ ನೀಡಲಾಗುವುದು ಎಂದು ಆಮಿಷವೊಡ್ಡಿದ್ದರು ಎಂದೂ ರೆಡ್ಡಿ ಆರೋಪಿಸಿದ್ದರು.

ಈಗಾಗಲೇ ತನಿಖೆ ಆರಂಭಿಸಿರುವ ಸಿಬಿಐ, ಪ್ರಕರಣದ ಸಂಪೂರ್ಣ ವಿವರ ಒದಗಿಸುವಂತೆ ಸೂಚಿಸಿ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.