ಮುಂಬೈ: ದಕ್ಷಿಣ ಮುಂಬೈನಲ್ಲಿರುವ ಪ್ರತಿಷ್ಠಿತ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್ಇ) ಕಟ್ಟಡಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಆವರಣದಲ್ಲಿ ಶೋಧ ನಡೆಸಿದ ನಂತರ ಅದು ಹುಸಿ ಕರೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಭಾರತದ ರಾಜಕೀಯ ನಾಯಕರೊಬ್ಬರ ಹೆಸರನ್ನು ಉಲ್ಲೇಖಿಸಿ ಬಿಎಸ್‌ಇ ಉದ್ಯೋಗಿಯೊಬ್ಬರಿಗೆ ಭಾನುವಾರ ಇಮೇಲ್ ಬಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್‌ಇ ಕಟ್ಟಡದಲ್ಲಿ ನಾಲ್ಕು ಆರ್‌ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಫೋಟಗೊಳ್ಳುತ್ತವೆ ಎಂದು ಇಮೇಲ್‌ನಲ್ಲಿ ಎಚ್ಚರಿಸಲಾಗಿತ್ತು. ಈ ಬಗ್ಗೆ ಬಿಎಸ್‌ಇ ಉದ್ಯೋಗಿ ಸ್ಟಾಕ್ ಎಕ್ಸ್‌ಚೇಂಜ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಅವರು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು.
ಸ್ಥಳಕ್ಕಾಗಮಿಸಿದ ಮುಂಬೈ ಪೊಲೀಸರು, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ಕಟ್ಟಡದಲ್ಲಿ ಶೋಧ ನಡೆಸಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 13ರ ರಾತ್ರಿ, ಬಿಎಸ್‌ಇಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬಿಎಸ್‌ಇ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.