ಬಿಎಸ್‌ಎಫ್ ಆರಂಭಿಸಿರುವ ಡ್ರೋನ್ ಯುದ್ಧ ತರಬೇತಿ ಶಾಲೆ
ಪಿಟಿಐ ಚಿತ್ರ
ಟೆಂಕನಪುರ (ಮಧ್ಯಪ್ರದೇಶ): ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ತನ್ನ ತರಬೇತಿ ಪಠ್ಯಕ್ಕೆ ಡ್ರೋನ್ ಯುದ್ಧವನ್ನು ಸೇರ್ಪಡೆಗೊಳಿಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಡ್ಡಾಯ ವಿಷಯವನ್ನಾಗಿಸಿದೆ.
ಕೇಂದ್ರ ಗೃಹ ಸಚಿವಾಲಯದಡಿ ಅರೆಸೇನಾ ಪಡೆಗಳು ನಡೆಸುತ್ತಿರುವ ಏಕೈಕ ಉನ್ನತ ಶಿಕ್ಷಣ ಸಂಸ್ಥೆಯಾದ ರುಸ್ತಮ್‌ಜಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಆರ್‌ಜೆಐಟಿ) ವಿದ್ಯಾರ್ಥಿಗಳಿಗಾಗಿ ಡ್ರೋನ್ ಪ್ರಯೋಗಾಯಲವನ್ನೂ ಆರಂಭಿಸಿದೆ.
ಹೊಸದಾಗಿ ಆರಂಭವಾಗಿರುವ ಡ್ರೋನ್ ಶಾಲೆಯು ಡ್ರೋನ್ ಕಮಾಂಡೊ ಹಾಗೂ ಡ್ರೋನ್ ವಾರಿಯರ್ಸ್ ಕೋರ್ಸ್‌ಗಳಲ್ಲಿ 45 ಸಿಬ್ಬಂದಿಯ ಮೊದಲ ಬ್ಯಾಚ್‌ಗೆ ತರಬೇತಿ ನೀಡಿದ್ದು, ಎರಡನೇ ಬ್ಯಾಚ್‌ಗೆ ತರಬೇತಿ ನೀಡುತ್ತಿದೆ.
ವಾರ್ಷಿಕ 500 ಸಿಬ್ಬಂದಿಗೆ ತರಬೇತಿ ನೀಡುವ ಗುರಿ ಹೊಂದಿರುವ ಬಿಎಸ್‌ಎಫ್, ಮುಂದಿನ ವರ್ಷಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಆಲೋಚನೆ ಹೊಂದಿದೆ. ಶಾಲೆಯಲ್ಲಿ ತರಬೇತಿ ನೀಡುವ ಅವಶ್ಯ ಉಪಕರಣಗಳ ಖರೀದಿಗಾಗಿ ₹20 ಕೋಟಿಯನ್ನು ಮೀಸಲಿಟ್ಟಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಆಧುನಿಕ ಯುಗದ ಯುದ್ಧಕ್ಕಾಗಿ ಅಗತ್ಯವಿರುವ ಉಪಕರಣಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲು ನಾವೀನ್ಯತಾ ಕೇಂದ್ರವನ್ನು ಆರಂಭಿಸಿದೆ.
ಡ್ರೋನ್‌ಗಳು ಅಥವಾ ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಸೇರಿದಂತೆ ಆಂತರಿಕ ಭದ್ರತಾ ಕ್ಷೇತ್ರದಲ್ಲಿನ ಈಚೆಗಿನ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬಿಎಸ್‌ಎಫ್ ಅಕಾಡೆಮಿಯು ತನ್ನದೇ ಆದ ತಜ್ಞ ಅಧಿಕಾರಿಗಳು, ನವೋದ್ಯಮಗಳು, ಶಿಕ್ಷಣ ತಜ್ಞರ ಭಾಗವಹಿಸುವಿಕೆಯೊಂದಿಗೆ ‘ಪೊಲೀಸ್ ತಂತ್ರಜ್ಞಾನ ನಾವೀನ್ಯತೆ ಕೇಂದ್ರ’ವನ್ನು ರಚಿಸಿದ್ದು, ಇದು 48 ಸಮಸ್ಯೆಗಳ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಲಿದೆ ಎಂದು ಬಿಎಸ್‌ಎಫ್ ಅಕಾಡೆಮಿಯ ನಿರ್ದೇಶಕ ಶಂಶೇರ್ ಸಿಂಗ್ ತಿಳಿಸಿದರು.
ಯುದ್ಧ ತಂತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆಗಾಗಿ ಮಾರ್ಗಸೂಚಿ ತಯಾರಿಸಲಿಕ್ಕಾಗಿ ಬಿಎಸ್‌ಎಫ್ ವಿವಿಧ ಐಐಟಿಗಳು ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿಯನ್ನು ಹಾಕಿದೆ.
ವಿವಿಧ ಶಸ್ತ್ರಾಸ್ತ್ರ ಎಂಜಿನಿಯರಿಂಗ್ ಕಾರ್ಯಾಗಾರಗಳು ಆರ್‌ಜೆಐಟಿ ಹಾಗೂ ಸಂಬಂಧಿತ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ತರಲಾಗಿದೆಶಂಶೇರ್ ಸಿಂಗ್ ಬಿಎಸ್‌ಎಫ್ ಅಕಾಡೆಮಿಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.