ADVERTISEMENT

‘ಒಳನುಸುಳುಕೋರರ ವಿರುದ್ಧ ಬಿಎಸ್‌ಎಫ್ ಪರಿಣಾಮಕಾರಿ ಕಾವಲು’

ಬಿಎಸ್‌ಎಫ್ ಸಂಸ್ಥಾಪನಾ ದಿನಾಚರಣೆಯಲ್ಲಿ ಕೇಂದ್ರ ನಿತ್ಯಾನಂದ ರೈ ಶ್ಲಾಘನೆ

ಪಿಟಿಐ
Published 4 ಡಿಸೆಂಬರ್ 2022, 10:59 IST
Last Updated 4 ಡಿಸೆಂಬರ್ 2022, 10:59 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ಅಮೃತಸರ: ‘ಗಡಿಯಲ್ಲಿ ಒಳನುಸುಳುವಿಕೆ, ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಹಾಗೂ ಡ್ರೋನ್‌ಗಳ ಬೆದರಿಕೆಯನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಚಿವ ನಿತ್ಯಾನಂದ ರೈ ಭಾನುವಾರ ಹೇಳಿದ್ದಾರೆ.

ಇಲ್ಲಿನ ಗುರುನಾನಕ್‌ ದೇವ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 58ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿಭಾಗದಲ್ಲಿ ಬಿಎಸ್‌ಎಫ್‌ ಇರುವುದರಿಂದ ದೇಶದಲ್ಲಿ ಶಾಂತಿ ನೆಲೆಸಿದೆ. 57 ವರ್ಷಗಳಿಂದ ಗಡಿಯನ್ನು ಸುರಕ್ಷಿತವಾಗಿರಿಸಲಾಗಿದೆ. ಗಡಿ ರಕ್ಷಣೆಗಾಗಿ ಬಿಎಸ್‌ಎಫ್‌ ಸಿಬ್ಬಂದಿಗೆ ರಾಡಾರ್, ಆಂಟಿ ಡ್ರೋನ್ ಗನ್‌ಗಳಂಥ ಸ್ಮಾರ್ಟ್‌ ಕಣ್ಗಾವಲು ಗ್ಯಾಜೆಟ್‌ಗಳನ್ನು ಒದಿಗಸಲಾಗುತ್ತಿದೆ’ ಎಂದು ಹೇಳಿದರು.

‘ಬಿಎಸ್‌ಎಫ್‌ನ ವಿವಿಧ ಹುದ್ದೆಗಳಲ್ಲಿ ಮಹಿಳಾ ಸಿಬ್ಬಂದಿಯು ಹೆಚ್ಚಿನ ಸಂಖ್ಯೆಯಲ್ಲಿರುವುದುಪ್ರಧಾನಿ ನರೇಂದ್ರ ಮೋದಿ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ADVERTISEMENT

ಬಿಎಸ್‌ಎಫ್‌ನ ಮಹಾನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ‘ಬಿಎಸ್‌ಎಫ್ ಪಡೆಯು ಇದುವೆರೆಗೆ ಭಾರತ–ಪಾಕಿಸ್ತಾನ ಗಡಿಯಲ್ಲಿ (ಪಂಜಾಬ್ ಭಾಗದಲ್ಲಿ 16, ಜಮ್ಮು ಗಡಿಯಲ್ಲಿ ಒಂದು) ಒಟ್ಟು 17 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಪಂಜಾಬ್ ಗಡಿಯಲ್ಲಿ ಕಳೆದ ವರ್ಷ 500 ಕೆಜಿಗೂ ಹೆಚ್ಚು ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭೂಗತ ಸುರಂಗ ಮಾರ್ಗಗಳ ಮೂಲಕ ಭಯೋತ್ಪಾದಕರು ದೇಶದೊಳಗೆ ನುಗ್ಗಲು ಯತ್ನಿಸುತ್ತಿರುವುದನ್ನು ಪತ್ತೆಹಚ್ಚಲು ಡಿಆರ್‌ಡಿಒನಂಥ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ’ ಎಂದರು.

ಅಮೃತಸರದ ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ, ಗುಪ್ತಚರ ದಳದ ಅಧಿಕಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.