ನವದೆಹಲಿ: ‘ಉಗ್ರರು ಭಾರತದ ಗಡಿಯೊಳಗೆ ನುಸುಳಲು ಬಳಸಿದ್ದ ಸುರಂಗದ ಮೂಲ ಪತ್ತೆ ಮಾಡಲು ಬಿಎಸ್‌ಎಫ್ ತಂಡವು ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿತ್ತು’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಹೋದ ತಿಂಗಳ 19ರಂದು ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ನಾಗ್ರೊಟಾದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿಭದ್ರತಾ ಪಡೆಯವರು ಜೈಷ್–ಎ–ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದರು.
ಈ ಉಗ್ರರು ಸುರಂಗ ಮಾರ್ಗವಾಗಿ ಗಡಿ ಪ್ರವೇಶಿಸಿದ್ದಾಗಿ ಹೇಳಲಾಗಿತ್ತು. ಈ ಕುರಿತ ತನಿಖೆಗೆ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ತಂಡವೊಂದನ್ನು ರಚಿಸಿತ್ತು.
‘ಉಗ್ರರಿಂದ ವಶಪಡಿಸಿಕೊಂಡಿದ್ದ ಮೊಬೈಲ್ ಸಾಧನದ ಆಧಾರದಲ್ಲಿ ಅವರು ಗಡಿಯೊಳಗೆ ಪ್ರವೇಶಿಸಲು ಬಳಸಿದ್ದ ಸುರಂಗವನ್ನು ಬಿಎಸ್‌ಎಫ್ ತಂಡ ಪತ್ತೆ ಮಾಡಿತ್ತು. ಅದರ ಮೂಲ ಹುಡುಕುತ್ತಾ ಸುರಂಗದೊಳಗೆ 200 ಮೀಟರ್ಸ್‌ನಷ್ಟು ದೂರ ಹೋಗಿತ್ತು. ಒಳಭಾಗದ ವಿಡಿಯೊ ಚಿತ್ರೀಕರಣ ಮಾಡಿಕೊಂಡು ವಾಪಾಸಾಗಿತ್ತು. ಇದು ತ್ವರಿತ ಮತ್ತು ಗೋಪ್ಯ ಕಾರ್ಯಾಚರಣೆಯಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಈ ಸುರಂಗವನ್ನು ಪಾಕಿಸ್ತಾನದ ನೆಲದಲ್ಲಿ ಕೊರೆಯಲಾಗಿದೆ. ಇದು ಜಮ್ಮುವಿನ ಸಾಂಬಾ ಜಿಲ್ಲೆಯ ರೇಗಲ್‌ಗೆ ಸಂಪರ್ಕ ಕಲ್ಪಿಸಿದೆ. ಇದರ ಮೂಲಕ ಗಡಿ ಪ್ರವೇಶಿಸಿದ್ದ ಉಗ್ರರು ಸಾಂಬಾದ ಜತ್ವಾಲ್ ಗ್ರಾಮದಿಂದ ಟ್ರಕ್‌ವೊಂದನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿಯತ್ತ ಬಂದಿದ್ದರು’ ಎಂದು ಬಿಎಸ್‌ಎಫ್ ಪ್ರಕಟಣೆ ತಿಳಿಸಿದೆ.
‘ನಮ್ಮ ತಂಡವು ನವೆಂಬರ್ 22ರಂದೇ ಸುರಂಗ ಪತ್ತೆ ಮಾಡಿತ್ತು. ಗಡಿಯೊಳಗೆ ಬಂದ ನಂತರ ಉಗ್ರರು ಅದರ ಪ್ರವೇಶ ದ್ವಾರವನ್ನು ಮಣ್ಣಿನಿಂದ ಮುಚ್ಚಿದ್ದರು. ಯಾರಿಗೂ ಕಾಣದಂತೆ ಅದನ್ನು ಪೊದೆಗಳಿಂದ ಮರೆಮಾಡಲಾಗಿತ್ತು. ಪಾಕಿಸ್ತಾನದ ಭಾಗದಲ್ಲಿದ್ದ ದ್ವಾರವನ್ನು ಮರಳು ಚೀಲಗಳಿಂದ ಮುಚ್ಚಲಾಗಿತ್ತು. ಅವುಗಳನ್ನು ಕರಾಚಿಯಿಂದ ತಂದಿರುವ ಕುರುಹುಗಳು ಸಿಕ್ಕಿವೆ. ಬಹಳ ವ್ಯವಸ್ಥಿತವಾಗಿ ಇದನ್ನು ಕೊರೆಯಲಾಗಿತ್ತು. ಪಾಕಿಸ್ತಾನದ ಛಾಕ್ ಭುರಾ, ರಜಬ್ ಸಾಹೀದ್ ಮತ್ತು ಆಸೀಫ್ ಸಾಹೀದ್ ಪೋಸ್ಟ್‌ಗಳು ಈ ಸುರಂಗದ ಸನಿಹದಲ್ಲೇ ಇವೆ’ ಎಂದೂ ಪ್ರಕಟಣೆ ವಿವರಿಸಿದೆ.
‘ಬಿಎಸ್‌ಎಫ್, ಜಮ್ಮು ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಸಂಘಟಿತ ಕಾರ್ಯಾಚರಣೆಯಿಂದ ಸುರಂಗ ಪತ್ತೆ ಮಾಡಲು ಸಾಧ್ಯವಾಗಿದೆ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.