ADVERTISEMENT

ಮುಧೋಳ ಹೌಂಡ್‌, ರಾಮ್‌ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2025, 7:36 IST
Last Updated 25 ಅಕ್ಟೋಬರ್ 2025, 7:36 IST
<div class="paragraphs"><p>ರಾಮ್‌ಪುರ ಹೌಂಡ್‌, ರಿಯಾ (ಮುಧೋಳ ಹೌಂಡ್)</p></div>

ರಾಮ್‌ಪುರ ಹೌಂಡ್‌, ರಿಯಾ (ಮುಧೋಳ ಹೌಂಡ್)

   

ನವದೆಹಲಿ: ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ಎಂಬ ದೇಸಿ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ (BSF) ತರಬೇತಿ ನೀಡುತ್ತಿದೆ.

ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗದ ಗಡಿಗಳಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳುವ ಅತ್ಯಂತ ಅಪಾಯಕಾರಿ ಕಮಾಂಡೊ ಕಾರ್ಯಾಚರಣೆಯಲ್ಲಿ ಈ ಎರಡು ತಳಿಯ ನಾಯಿಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ADVERTISEMENT

ಮಧ್ಯಪ್ರದೇಶದ ಟೆಕಾನ್ಪುರ ಎಂಬಲ್ಲಿರುವ ಬಿಎಸ್‌ಎಫ್‌ನ ರಾಷ್ಟ್ರೀಯ ತರಬೇತಿ ಕೇಂದ್ರಕ್ಕೆ 2018ರಲ್ಲಿ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಸಿ ತಳಿಗಳನ್ನು ಸೇನೆಯಲ್ಲಿ ನಿಯೋಜಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆಯೇ ದೇಸಿ ಶ್ವಾನ ತಳಿಗಳನ್ನು ಅನ್ವೇಷಣೆಗೆ ಬಿಎಸ್‌ಎಫ್‌ ಯೋಜನೆಯೊಂದನ್ನು ರೂಪಿಸಿತು.

ಸೂಕ್ತ ತಳಿಗಳ ಹುಡುಕಾಟ, ಅವುಗಳ ಅಭಿವೃದ್ಧಿ, ಸೇನೆಯಲ್ಲಿ ನಿಯೋಜನೆ ಮತ್ತು ಕಾರ್ಯಾಚರಣೆಯ ವಿಧಾನವನ್ನು ಗಮನಿಸಿ ಅಂತಿಮವಾಗಿ ಉತ್ತರ ಪ್ರದೇಶದ ರಾಮ್‌ಪುರ ಹಾಗೂ ಕರ್ನಾಟಕದ ಮುಧೋಳ ಹೌಂಡ್ ತಳಿಯನ್ನು ಆಯ್ಕೆ ಮಾಡಿತು. ಇವು ಭಯೋತ್ಪಾದಕರು ಹಾಗೂ ನಕ್ಸಲರಿಗೇ ದುಸ್ವಪ್ನವಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಮುಧೋಳ ಹೌಂಡ್

ಮುಧೋಳ ಹೌಂಡ್‌ ಅನ್ನು ಕ್ಯಾರಾವಾನ್ ಹೌಂಡ್ ಎಂದೂ ಕರೆಯಲಾಗುತ್ತದೆ. ದಕ್ಕನ್‌ ಪ್ರಸ್ತಭೂಮಿ ಅದರಲ್ಲೂ ಕರ್ನಾಟಕದ ತಳಿಯಾದ ಇದು ತನ್ನ ವೇಗ ಹಾಗೂ ತೀಕ್ಷ್ಣ ದೃಷ್ಟಿ ಶಕ್ತಿಯಿಂದಾಗಿ ಮರಾಠಾ ಸೇನೆಯಲ್ಲಿ ಸ್ಥಾನ ಪಡೆದಿತ್ತು.

ಸಪೂರ ದೇಹ, ಹೆಚ್ಚಿನ ಶಕ್ತಿ ಮತ್ತು ಆಕರ್ಷಕ ತಳಿಯಾದ ಮುಧೋಳ ಹೌಂಡ್‌ ತೀಕ್ಷ್ಣ ಇಂದ್ರೀಯಗಳನ್ನು ಹೊಂದಿದೆ. ಅದರಲ್ಲೂ ಚುರುಕುತನ ಮತ್ತು ಜಾಗರೂಕತೆಯಲ್ಲಿ ಇದಕ್ಕೆ ಸಾಟಿ ಬೇರೊಂದಿಲ್ಲ. ಈ ತಳಿಯ ನಾಯಿಗಳಿಗೆ ತರಬೇತಿ ನೀಡುವುದು ಸುಲಭ. ಭದ್ರತಾ ಕಾರ್ಯಾಚರಣೆಯಲ್ಲಿ ಎತ್ತಿದ ಕೈ.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2025ರಲ್ಲಿ ಬಿಡುಗಡೆ ಮಾಡಿದ ಅಂಚೆ ಚೀಟಿಯಲ್ಲಿ ಮುದ್ರಣಗೊಂಡ ನಾಲ್ಕು ದೇಸಿ ನಾಯಿಗಳಲ್ಲಿ ಮುಧೋಳ ಹೌಂಡ್‌ ಕೂಡಾ ಒಂದು. ಆ ಮೂಲಕ ದೇಸಿ ಶ್ವಾನ ತಳಿಗಳಿಗೆ ಗೌರವ ಸಲ್ಲಿಸಲಾಯಿತು.

ಲಖನೌನದಲ್ಲಿ 2024ರಲ್ಲಿ ಆಯೋಜನೆಗೊಂಡಿದ್ದ ಭಾರತೀಯ ಪೊಲೀಸ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ‘ರಿಯಾ’ ಎಂಬ ಮುಧೋಳ ಹೌಂಡ್ ತಳಿಯು, 116 ಪ್ರತಿಸ್ಪರ್ಧಿಗಳನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ. ಟ್ರ್ಯಾಕರ್ ಟ್ರೇಡ್ ಮತ್ತು ಕೂಟ ಶ್ರೇಷ್ಠ ಎಂಬ ಎರಡು ಪ್ರಶಸ್ತಿಗಳನ್ನು ಇದು ತನ್ನ ಮುಡಿಕೇರಿಸಿಕೊಂಡು ಇಡೀ ದೇಶ ಕರ್ನಾಟಕದ ಮುಧೋಳದತ್ತ ನೋಡುವಂತೆ ಮಾಡಿತು.

ರಾಮ್‌ಪುರ ಹೌಂಡ್‌

ಉತ್ತರ ಪ್ರದೇಶದ ರಾಮ್‌ಪುರ ತಳಿಯ ನಾಯಿಗಳನ್ನು ಹಿಂದೆ ಮೊಘಲರು ಹಾಗೂ ಸ್ಥಳೀಯ ರಾಜರು ಇವುಗಳನ್ನು ಯುದ್ಧಗಳಲ್ಲಿ, ಬೇಟೆಗಳಲ್ಲಿ ಬಳಸಿದ ಇತಿಹಾಸಗಳಿವೆ. ಅದರಲ್ಲೂ ತೋಳ, ನರಿ ಹಾಗೂ ಚಿರತೆಗಳನ್ನು ಬೇಟೆಯಾಡಲು ಈ ತಳಿಯ ನಾಯಿಗಳನ್ನು ಬಳಸಿದ ಉದಾಹರಣೆಗಳಿವೆ.

ಎತ್ತರದ ನಿಲುವು, ಶಕ್ತಿಶಾಲಿ ದೇಹ, ಚುರುಕುತನ ಹಾಗೂ ಸುಸ್ತಿಲ್ಲದ ಬಹುದೂರ ಓಡುವ ಸಾಮರ್ಥ್ಯ ಇದರ ಲಕ್ಷಣಗಳು. ಧೈರ್ಯ, ಬದ್ಧತೆ, ಬುದ್ಧಿಶಕ್ತಿ ಹಾಗೂ ಸೂಕ್ಷ್ಮ ಗುಣದಿಂದಾಗಿ ಇವುಗಳನ್ನು ತರಬೇತುಗೊಳಿಸುವುದು ಸುಲಭ. ವೇಗ, ತಾಕತ್ತು ಮತ್ತು ಭಯವಿಲ್ಲದ ವರ್ತನೆಯಿಂದ ಈ ತಳಿಯನ್ನು ಬಿಎಸ್‌ಎಫ್‌ ಆಯ್ಕೆ ಮಾಡಿತು.

ಕುಟುಂಬದೊಂದಿಗೆ ಹೆಚ್ಚು ಪ್ರೀತಿ ಹಾಗೂ ಒಡನಾಟ ಹೊಂದುವ ಗುಣವುಳ್ಳ ರಾಮ್‌ಪುರ ತಳಿಯ ಶ್ವಾನಗಳು, ಅಪರಿಚಿತರ ಪಾಲಿಗೆ ಅಪಾಯವೇ ಸರಿ. 12ರಿಂದ 14 ವರ್ಷಗಳ ಜೀವಿತಾವಧಿಯನ್ನು ಈ ತಳಿ ಹೊಂದಿವೆ. ಆರೋಗ್ಯವಾಗಿರಬೇಕೆಂದರೆ ದೈಹಿಕ ಮತ್ತು ಮಾನಸಿಕ ವ್ಯಾಯಾಮ ನಿತ್ಯ ಅಗತ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.