ADVERTISEMENT

ಟೆಲಿಕಾಂ ಸರ್ಕಲ್‌ಗಳ ವಿಲೀನಕ್ಕೆ ಬಿಎಸ್‌ಎನ್‌ಎಲ್ ಅಸ್ತು

ದಕ್ಷತೆ ಹೆಚ್ಚಿಸಲು ಕ್ರಮ ಎಂದ ಕಂಪನಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 5:48 IST
Last Updated 7 ಮೇ 2019, 5:48 IST
   

ನವದೆಹಲಿ:ದಕ್ಷತೆ ಹೆಚ್ಚಿಸುವ ಸಲುವಾಗಿ ಕೆಲವು ಟೆಲಿಕಾಂ ಸರ್ಕಲ್‌ಗಳನ್ನು ವಿಲೀನಗೊಳಿಸಲು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ನಿರ್ಧರಿಸಿದೆ.

‘ಕಂಪನಿಗೆ ನೆರವಾಗದ ಕೆಲವು ಸರ್ಕಲ್‌ಗಳಿವೆ. ಇವುಗಳನ್ನು ವಿಲೀನಗೊಳಿಸಲು ಬಿಎಸ್‌ಎನ್‌ಎಲ್ ಮಂಡಳಿ ಸಮ್ಮತಿಸಿದೆ’ ಎಂದು ಉನ್ನತ ಮೂಲಗಳು ಪ್ರಜಾವಾಣಿಗೆ ತಿಳಿಸಿವೆ.

ಈವರೆಗೆ ಕಂಪನಿಯಲ್ಲಿ 24 ಸರ್ಕಲ್‌ಗಳಿದ್ದು, ಮೂರು ತರಬೇತಿ ಸಂಸ್ಥೆಗಳಿವೆ. ಮಂಡಳಿಯ ಮೂಲಗಳ ಪ್ರಕಾರ ಈ ಪೈಕಿ 12 ಸರ್ಕಲ್‌ಗಳಿಂದ ಕಂಪನಿಗೆ ಉಪಯೋಗವಿಲ್ಲ ಎನ್ನಲಾಗಿದೆ. ವಿಲೀನಕ್ಕಾಗಿ ಗೊತ್ತುಪಡಿಸಲಾಗಿರುವ ಸರ್ಕಲ್‌ಗಳಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ‍್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಛತ್ತೀಸಗಡವೂ ಸೇರಿವೆ.

ADVERTISEMENT

ವಿಲೀನ ಪ್ರಕ್ರಿಯೆಯಿಂದ ಉಂಟಾಗುವ ಹೆಚ್ಚುವರಿ ಸಿಬ್ಬಂದಿಗಳನ್ನು ಕಂಪನಿಯಲ್ಲಿ ಇತರ ಕೆಲಸಗಳಿಗೆ ನಿಯುಕ್ತಿಗೊಳಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ 54 ಸಾವಿರದಷ್ಟು ಸಿಬ್ಬಂದಿ ಕಡಿತ ಮಾಡುವ ಪ್ರಸ್ತಾವವನ್ನು ಬಿಎಸ್‌ಎನ್‌ಎಲ್‌ ಆಡಳಿತ ಮಂಡಳಿ ಇತ್ತೀಚೆಗೆ ಅನುಮೋದಿಸಿತ್ತು. ಇದಕ್ಕೆ ಸಿಬ್ಬಂದಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿಷಯ ರಾಜಕೀಯ ಆಯಾಮ ಪಡೆದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ನಿವೃತ್ತಿ ವಯಸ್ಸನ್ನು ಈಗಿರುವ 60ರಿಂದ 58ಕ್ಕೆ ಇಳಿಕೆ ಮಾಡಲು ಮತ್ತು 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸಿಬ್ಬಂದಿಗೆಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಆದರೆ,ಸರ್ಕಾರದ ಪ್ರಸ್ತಾವಕ್ಕೆ ‘ಬಿಎಸ್‌ಎನ್‌ಎಲ್‌’ ಉದ್ಯೋಗಿಗಳ ಸಂಘ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.