ADVERTISEMENT

ಬಿಎಸ್‌ಪಿ ಮತ ಬಿಜೆಪಿಗೆ ಸಿಕ್ಕಿದ್ದು ಏಕೆ? ಈ ಬಗ್ಗೆ ಮಾಯಾವತಿ ಹೇಳಿದ್ದೇನು?

ಗೂಂಡಾರಾಜ್‌ ಭಯದಿಂದ ಎಸ್‌ಪಿಯಿಂದ ದೂರಸರಿದ ಮತದಾರರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 5:46 IST
Last Updated 12 ಮಾರ್ಚ್ 2022, 5:46 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ (ಪಿಟಿಐ ಚಿತ್ರ)
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ (ಪಿಟಿಐ ಚಿತ್ರ)   

- ಮತವಿಭಜನೆಗೆ ಜಾತಿವಾದಿ ಮಾಧ್ಯಮಗಳೇ ಕಾರಣ

- ಮುಸ್ಲಿಂ ಮತದಾರರು ಎಸ್‌ಪಿ ನಂಬಿ ಕೆಟ್ಟರು

- ಬಿಜೆಪಿ ವಿರುದ್ಧ ನಮ್ಮದು ಸೈದ್ಧಾಂತಿಕ ಹೋರಾಟ

ADVERTISEMENT

ಲಖನೌ: ‘ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಮತ್ತೆ ಗೂಂಡಾರಾಜ್‌ ಬರುತ್ತದೆ ಎಂಬ ಭಯದಿಂದ, ಬಿಎಸ್‌ಪಿಯ ಬೆಂಬಲಕ್ಕಿದ್ದಮೇಲ್ಜಾತಿಯ ಮತದಾರರು ಮತ್ತು ದಲಿತರು ನಮ್ಮಿಂದ ದೂರ ಸರಿದರು. ಬಿಜೆಪಿಗೆ ಮತ ನೀಡಿದರು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಶೇ12.8ರಷ್ಟು ಮತಗಳನ್ನು ಪಡೆದಿದ್ದರೂ, ಬಿಎಸ್‌ಪಿ ಗೆದ್ದದ್ದು ಒಂದು ಕ್ಷೇತ್ರದಲ್ಲಿ ಮಾತ್ರ. ಇದು ಬಿಎಸ್‌ಪಿಯ ಈವರೆಗಿನ ಅತ್ಯಂತ ಕಳಪೆ ಸಾಧನೆ. ಬಿಜೆಪಿಯೇತರ ಮತಗಳನ್ನು ಬಿಎಸ್‌ಪಿ ವಿಭಜನೆ ಮಾಡಿದ್ದರಿಂದಲೇ, ಎಸ್‌ಪಿ ಹಲವು ಕ್ಷೇತ್ರಗಳಲ್ಲಿ ಸೋಲಬೇಕಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. ಬಿಎಸ್‌ಪಿಯು, ಬಿಜೆಪಿಯ ಬಿ ಟೀಂ ಎಂದು ಕೆಲವರು ಟೀಕಿಸಿದ್ದಾರೆ. ಇದರ ಮಧ್ಯೆಯೇ ಬಿಎಸ್‌ಪಿ ಬೆಂಬಲಿಗರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.

‘ಬಿಎಸ್‌ಪಿಯು ಬಿಜೆಪಿಯ ಬಿ ಟೀಂ ಎಂದು ಜಾತಿವಾದಿ ಮಾಧ್ಯಮಗಳು ಪದೇ ಪದೇ ಹೇಳಿದವು. ಇದರಿಂದ ಮುಸ್ಲಿಂ ಮತದಾರರು ಬಿಎಸ್‌ಪಿಯಿಂದ ದೂರವಾದರು. ಮುಸ್ಲಿಂ ಮತದಾರರು ಎಸ್‌ಪಿಯನ್ನು ನಂಬಿಕೆಟ್ಟರು. ಇದು ತ್ರಿಕೋನ ಸ್ಪರ್ಧೆಯಾಗಿದ್ದಿದ್ದರೆ, ಬಿಜೆಪಿ ಅಧಿಕಾರಕ್ಕೆ ಮರಳುವುದನ್ನು ತಡೆಯಬಹುದಿತ್ತು’ ಎಂದು ಹೇಳಿದ್ದಾರೆ.

‘ಬಿಜೆಪಿ ವಿರುದ್ಧದ ನಮ್ಮ ಹೋರಾಟ ಕೇವಲ ರಾಜಕೀಯದ್ದು ಆಗಿರಲಿಲ್ಲ. ಜತೆಗೆ ಅದು ಸೈದ್ಧಾಂತಿಕ ಹೋರಾಟವೂ ಹೌದು. ಚುನಾವಣೆಯಲ್ಲಿ ಎಸ್‌ಪಿ ಸ್ಪರ್ಧಿಸುತ್ತಿರುವಷ್ಟು ಪ್ರಬಲವಾಗಿ ಬಿಎಸ್‌ಪಿ ಸ್ಪರ್ಧಿಸುತ್ತಿಲ್ಲ ಎಂಬ ಸುಳ್ಳನ್ನೂ ಜಾತಿವಾದಿ ಮಾಧ್ಯಮಗಳು ಹರಡಿದವು. ಇದರಿಂದ ಹೆದರಿದ ಬಿಜೆಪಿ ವಿರೋಧಿ ಹಿಂದೂ ಮತದಾರರು ಬಿಎಸ್‌ಪಿಯಿಂದ ದೂರ ಸರಿದರು’ ಎಂದು ಅವರು ಆರೋಪಿಸಿದ್ದಾರೆ.

ಈ ಸೋಲಿನಿಂದ ನಮ್ಮ ಕಾರ್ಯಕರ್ತರು ಧೃತಿಗೆಡಬಾರದು. ಬದಲಿಗೆ ಸೋಲಿನಿಂದ ಪಾಠ ಕಲಿಯಬೇಕು. ಪಕ್ಷವನ್ನು ಮುನ್ನಡೆಸಬೇಕು.

- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮಾಯಾವತಿ ಮತ್ತು ಅಸಾದ್ದುದೀನ್ ಒವೈಸಿ ಭಾರಿ ಕೊಡುಗೆ ನೀಡಿದ್ದಾರೆ. ಅವರಿಗೆ ಪದ್ಮ ವಿಭೂಷಣ ಮತ್ತು ಭಾರತ ರತ್ನ ನೀಡಬೇಕು.

- ಸಂಜಯ್ ರಾವುತ್, ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.