ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ಜಾರಿ ಬಿದ್ದಿರುವ ಬೃಹತ್ ಯಂತ್ರ
ಪಿಟಿಐ ಚಿತ್ರ
ಅಹಮದಾಬಾದ್ (ಗುಜರಾತ್): ಅಹಮದಾಬಾದ್–ಮುಂಬೈ ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ನಿರ್ಮಾಣ ಕಾರ್ಯಕ್ಕೆ ಬಳಸಿದ್ದ ಬೃಹತ್ ಯಂತ್ರವು (ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ) ತನ್ನ ಸ್ಥಾನದಿಂದ ಜಾರಿ ಬಿದ್ದ ಪರಿಣಾಮ, ಹಲವು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಹಮದಾಬಾದ್ ಸಮೀಪದ ವಟ್ವಾದಲ್ಲಿ ಭಾನುವಾರ ರಾತ್ರಿ 11ರ ಸುಮಾರಿಗೆ ಈ ಘಟನೆ ನಡೆದಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ರಾಷ್ಟ್ರೀಯ ಹೈ–ಸ್ಪೀಡ್ ರೈಲು ನಿಗಮ (NHSRCL) ತಿಳಿಸಿದೆ.
'ಮಾರ್ಚ್ 23ರ ರಾತ್ರಿ 11ರ ಸುಮಾರಿಗೆ, ವಟ್ವಾದಲ್ಲಿ ವಯಾಡಕ್ಟ್ (ಸೇತುವೆ) ನಿರ್ಮಾಣಕ್ಕಾಗಿ ಬಳಸಲಾದ 'ಸೆಗ್ಮೆಂಟಲ್ ಲಾಂಚಿಂಗ್ ಗ್ಯಾಂಟ್ರಿ', ಕಾಂಕ್ರಿಟ್ ಬೀಮ್ ಅಳವಡಿಸಿ ಹಿಂದಕ್ಕೆ ಸರಿಯುವಾಗ ಜಾರಿದೆ' ಎಂದು ಹೇಳಿಕೆ ಬಿಡುಗಡೆ ಮಾಡಿದೆ.
'ಇದು, ಅಕ್ಕಪಕ್ಕದ ರೈಲ್ವೆ ಮಾರ್ಗದ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪರಿಸ್ಥಿತಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಸಾವು–ನೋವು ಸಂಭವಿಸಿಲ್ಲ. ಸದ್ಯ ನಿರ್ಮಿಸಲಾಗಿರುವ ರಚನೆಗೂ ಯಾವುದೇ ಹಾನಿಯಾಗಿಲ್ಲ' ಎಂದು ವಿವರಿಸಿದೆ.
ಅಪಾಯ ಸಂಭವಿಸಿಲ್ಲವಾದರೂ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕನಿಷ್ಠ 25 ರೈಲುಗಳ ಪ್ರಯಾಣ ರದ್ದು ಮಾಡಲಾಗಿದೆ. 15 ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದ್ದು, ಐದು ರೈಲುಗಳ ವೇಳಾಪಟ್ಟಿ ಬದಲಿಸಲಾಗಿದೆ. ಆರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಹಮದಾಬಾದ್ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಂತ್ರ ಜಾರಿದ್ದರಿಂದ ಹಾನಿಯಾಗಿರುವ ರೈಲು ಹಳಿಯಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದೂ ಹೇಳಿದ್ದಾರೆ.
ಈ ಘಟನೆಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕಗಾರಿಗಾಗಿ ಸಹಾಯವಾಣಿ ಸಂಖ್ಯೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.