ಸಾಂದರ್ಭಿಕ ಚಿತ್ರ
ಅಮರಾವತಿ: ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಉದ್ಯಮಿಯೊಬ್ಬರು ₹140 ಕೋಟಿ ಮೌಲ್ಯದ 121 ಕೆ.ಜಿ ಚಿನ್ನ ಕಾಣಿಕೆ ನೀಡಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೆಂಕಟೇಶ್ವರ ಸ್ವಾಮಿಯ ಭಕ್ತರೊಬ್ಬರು ಕಂಪನಿಯೊಂದನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಕೃತಜ್ಞತೆಯ ಸಂಕೇತವಾಗಿ ದೇವರಿಗೆ ಚಿನ್ನವನ್ನು ದಾನ ಮಾಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ.
‘ನನ್ನ ಕಂಪನಿಯ ಶೇ 60ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ₹6,000 ಕೋಟಿಯಿಂದ ₹7,000 ಕೋಟಿ ಗಳಿಸಿದ್ದೇನೆ. ವೆಂಕಟೇಶ್ವರ ಸ್ವಾಮಿ ಅನುಗ್ರಹದಿಂದಲೇ ನಾನು ಇಷ್ಟೊಂದು ಸಂಪತ್ತನ್ನು ಗಳಿಸಿದ್ದೇನೆ. ಕೃತಜ್ಞತೆಯ ಸಂಕೇತವಾಗಿ ದೇವರಿಗೆ ಚಿನ್ನವನ್ನು ಕಾಣಿಕೆ ನೀಡಲು ನಿರ್ಧರಿಸಿದ್ದೇನೆ’ ಎಂದು ಹೆಸರೇಳಲಿಚ್ಛಿಸದ ಉದ್ಯಮಿ ತಿಳಿಸಿದ್ದಾರೆ.
‘ಪ್ರತಿದಿನ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು 120 ಕೆ.ಜಿ ತೂಕದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗುತ್ತದೆ ಎಂದು ಟಿಡಿಪಿ ಮುಖ್ಯಸ್ಥರು ಹೇಳಿದ್ದರು. ಹಾಗಾಗಿ ನಾನು 121 ಕೆ.ಜಿ ತೂಕದ ಚಿನ್ನವನ್ನು ಕಾಣಿಕೆ ನೀಡುತ್ತಿದ್ದೇನೆ’ ಎಂದು ಉದ್ಯಮಿ ಹೇಳಿದ್ದಾರೆ.
ತಿರುಪತಿಯ ಉಚಿತ ಅನ್ನದಾನ ಕಾರ್ಯಕ್ರಮಕ್ಕೆ ಬೆಂಗಳೂರಿನ ಉದ್ಯಮಿ ಕಲ್ಯಾಣ ರಾಮನ್ ಕೃಷ್ಣಮೂರ್ತಿ ₹1 ಕೋಟಿ ಹಾಗೂ ಕೆ.ಎಂ. ಶ್ರೀನಿವಾಸ ಮೂರ್ತಿ 148 ಗ್ರಾಂ ತೂಕದ, ಅಂದಾಜು ₹25 ಲಕ್ಷ ಮೌಲ್ಯದ ಚಿನ್ನದ ಪದಕ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.