ADVERTISEMENT

ಸಿಎಎ ಮುಸ್ಲಿಂ ವಿರೋಧಿ, ಪೌರತ್ವ ಕಸಿಯುತ್ತದೆ ಎಂದು ಹೇಳಿಯೇ ಇಲ್ಲ: ಕಪಿಲ್ ಸಿಬಲ್

ಏಜೆನ್ಸೀಸ್
Published 13 ಮಾರ್ಚ್ 2020, 13:00 IST
Last Updated 13 ಮಾರ್ಚ್ 2020, 13:00 IST
ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್
ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮುಸ್ಲಿಂ ವಿರೋಧಿಯಲ್ಲ ಮತ್ತು ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಾದಕ್ಕೆ ರಾಜ್ಯಸಭೆಯಲ್ಲಿ ಗುರುವಾರ ಅನಿರೀಕ್ಷಿತ ಬೆಂಬಲ ಸಿಕ್ಕಿದೆ.

ದೆಹಲಿ ಹಿಂಸಾಚಾರ ಕುರಿತು ರಾಜ್ಯಸಭೆಯಲ್ಲಿ ಗುರುವಾರ ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸುವ ಸಂದರ್ಭದಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ "ಸಿಎಎ ಮುಸ್ಲಿಂ-ವಿರೋಧಿ ಎಂದಾಗಲೀ, ಇದು ಯಾರದೇ ಪೌರತ್ವವನ್ನು ಕಸಿದುಕೊಳ್ಳುತ್ತದೆ ಎಂದು ನಾವೆಂದೂ ಹೇಳಿಲ್ಲ" ಎಂದು ಹೇಳುವ ಮೂಲಕ ಸ್ವತಃ ಆಡಳಿತ ಪಕ್ಷದ ಸದಸ್ಯರನ್ನು ಅಚ್ಚರಿಯಲ್ಲಿ ಕೆಡಹಿದರು.

ದೆಹಲಿ ಹಿಂಸಾಚಾರವು ಯೋಜಿತ ಹಿಂಸಾಚಾರ ಎಂಬ ಬಿಜೆಪಿ ನಿಲುವನ್ನು ಪುನರುಚ್ಚರಿಸಿದ ಅಮಿತ್ ಶಾ, ಸಿಎಎ ಕುರಿತಾಗಿ ವಿರೋಧ ಪಕ್ಷಗಳ ಮುಖಂಡರ ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿ ಹರಡುವಿಕೆಯಿಂದಾಗಿ ಒಂದು ಸಮುದಾಯದವರಲ್ಲಿ ಆತಂಕ ಹುಟ್ಟಲು ಕಾರಣವಾಯಿತು, ಇದು ರಾಜಧಾನಿ ಹಿಂಸಾಚಾರದಲ್ಲಿ ಪ್ರಧಾನ ಪಾತ್ರ ವಹಿಸಿತು ಎಂದರು.

ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರದ್ದೇ ಪೌರತ್ವ ಕಸಿದುಕೊಳ್ಳುವ ಅಂಶ ಇಲ್ಲ. ಆದರೆ ವಿರೋಧ ಪಕ್ಷಗಳು, ಮುಸ್ಲಿಮರ ಪೌರತ್ವ ಕಸಿದುಕೊಳ್ಳಲಾಗುತ್ತದೆ ಎಂಬ ಅಪಪ್ರಚಾರದ ಮೂಲಕ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಭಯ ಹುಟ್ಟಿಸಿದವು, ಜನರ ದಾರಿ ತಪ್ಪಿಸಲಾಯಿತು ಎಂದ ಶಾ, "ಯಾರದೇ ಪೌರತ್ವ ಕಸಿದುಕೊಳ್ಳುವ ಕುರಿತಾದ ಒಂದೇ ಒಂದು ವಿಧಿಯು ಕಾಯ್ದೆಯಲ್ಲಿದ್ದರೆ ತೋರಿಸಿ" ಎಂದು ಸವಾಲೆಸೆದರು.

ಆ ವೇಳೆಗೆ ಎದ್ದು ನಿಂತ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, "ಸಿಎಎ ಯಾವುದೇ ವ್ಯಕ್ತಿಯ ಪೌರತ್ವ ಕಸಿಯುತ್ತದೆ ಎಂದು ಯಾರೂ ಹೇಳುತ್ತಿಲ್ಲ. ನಾವಂತೂ ಹಾಗೆ ಹೇಳಿಲ್ಲ" ಎಂದಾಗ, ಆಡಳಿತ ಪಕ್ಷದವರು ಗದ್ದಲ ಮಾಡಿದರು. "ಸಿಬಲ್ ಪಕ್ಷದ ಮುಖಂಡರೇ ಸಿಎಎ ಮುಸ್ಲಿಮರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಸಾರಿ ಹೇಳಿದ ಅದೆಷ್ಟೋ ಭಾಷಣಗಳನ್ನು ನಾನು ಎತ್ತಿ ತೋರಿಸಬಲ್ಲೆ" ಎಂದು ಅಮಿತ್ ಶಾ ತಿರುಗೇಟು ನೀಡಿದರು.

2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಅಂಗೀಕಾರವಾದ ಸಿಎಎ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ದೆಹಲಿ, ಮಂಗಳೂರು ಸೇರಿದಂತೆ ಕೆಲವೆಡೆ ಘರ್ಷಣೆಗಳು ಕೋಮು ಹಿಂಸಾಚಾರಕ್ಕೆ ತಿರುಗಿ, ಸಾವುನೋವುಗಳೂ ಸಂಭವಿಸಿದವು, ಅಪಾರ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿತ್ತು.

ರಾಜ್ಯಸಭೆಯಲ್ಲಿ ಶಾ ಹೇಳಿಕೆಗೆ ಉತ್ತರಿಸಿದ ಸಿಬಲ್, "ಸಿಎಎಯಿಂದ ಸಮಸ್ಯೆಯಲ್ಲ, ಆದರೆ ಎನ್‌ಪಿಆರ್‌ನಲ್ಲಿರುವ ಹೆಚ್ಚುವರಿ ಪ್ರಶ್ನೆಗಳಿಂದ ಸಮಸ್ಯೆಯಾಗಿದೆ" ಎಂದರು.

ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ಎನ್‌ಪಿಆರ್ ವೇಳೆ ಯಾವುದೇ ದಾಖಲೆಗಳನ್ನು ಕೇಳುವುದೂ ಇಲ್ಲ, ಯಾರನ್ನೂ 'ಶಂಕಾಸ್ಪದರು' ಎಂದು ಗುರುತು ಮಾಡುವುದೂ ಇಲ್ಲ ಎಂದರು.

ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಅಮಿತ್ ಮಾಳವೀಯ, ಸಿಎಎ ಯಾರದೇ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದಾದರೆ, ಮತ್ತು ಕಾಂಗ್ರೆಸಿಗೆ ಈ ವಿಷಯ ಅರ್ಥವಾಗಿದ್ದರೆ, ಸೋನಿಯಾ ಗಾಂಧಿಯವರು ಮನೆಗಳಿಂದ ಹೊರಗೆ ಬರಲು, ಬೀದಿಗೆ ಇಳಿಯಲು ಮತ್ತು ಹೋರಾಡಲು ಯಾಕೆ ಪ್ರಚೋದಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.