ADVERTISEMENT

ಎಸ್‌ಸಿ ವಿದ್ಯಾರ್ಥಿವೇತನಕ್ಕೆ ₹59,000 ಕೋಟಿ

ಹೊಸ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ: ಐದು ವರ್ಷಗಳಲ್ಲಿ ಜಾರಿಯ ಗುರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:35 IST
Last Updated 23 ಡಿಸೆಂಬರ್ 2020, 21:35 IST
   

ನವದೆಹಲಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕಾಗಿ ಮುಂದಿನ 5 ವರ್ಷಗಳಲ್ಲಿ ₹ 59,000 ಕೋಟಿಯನ್ನು ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಸಮುದಾಯಕ್ಕೆ ಸೇರಿದ ಕಡುಬಡವ ಕುಟುಂಬಗಳ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಅಂತಹ 1.36 ಕೋಟಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಶಿಕ್ಷಣ ಮುಂದುವರಿಸುತ್ತಿಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಮರಳಿ ತರುವುದು ಈ ಯೋಜನೆಯ ಗುರಿ. ಈ ಯೋಜನೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸುವ ಅಭಿಯಾನ ಶೀಘ್ರವೇ ಆರಂಭವಾಗಲಿದೆ ಎಂದು ಸರ್ಕಾರ ಹೇಳಿದೆ.

ಈ ಸಮುದಾಯದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಕೈಗೊಳ್ಳುವ ಉನ್ನತ ಶಿಕ್ಷಣ ಕೋರ್ಸ್‌ನ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ ₹ 59,041 ಕೋಟಿಯನ್ನು ಸರ್ಕಾರವು ವೆಚ್ಚ ಮಾಡಲಿದೆ. ಇದರಲ್ಲಿ ಕೇಂದ್ರ ಸರ್ಕಾರವು ₹ 35,534 (ಶೇ 60ರಷ್ಟು) ವೆಚ್ಚವನ್ನು ಭರಿಸಲಿದೆ. ರಾಜ್ಯ ಸರ್ಕಾರಗಳು ಶೇ 40ರಷ್ಟನ್ನು ಭರಿಸಲಿವೆ.

ADVERTISEMENT

ಸಂಪುಟ ಸಭೆಯ ನಿರ್ಧಾರಗಳು: 51 ಶೈಕ್ಷಣಿಕ ಚಾನಲ್‌ಗಳನ್ನು ಆರಂಭಿಸಲು ಪ್ರಸಾರ ಭಾರತಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಧ್ಯೆ ಒಪ್ಪಂದ ಮಾಡಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.

ಸಿನಿಮೋತ್ಸವಗಳ ನಿರ್ದೇಶನಾಲಯ, ಭಾರತೀಯ ರಾಷ್ಟ್ರೀಯ ಸಿನಿಮಾ ಆರ್ಕೈವ್‌, ಮಕ್ಕಳ ಸಿನಿಮಾ ಸೊಸೈಟಿ, ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮಗಳ ವಿಲೀನ ಮಾಡಲು ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ನೇರ ವರ್ಗಾವಣೆ...
*ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕೋರ್ಸ್‌ ಅನ್ನು ಆಯ್ಕೆಮಾಡಿಕೊಳ್ಳಬಹುದು. ಆ ಕೋರ್ಸ್‌ನ ವೆಚ್ಚವನ್ನು ಸರ್ಕಾರ ಭರಿಸಲಿದೆ.
* ವಿದ್ಯಾರ್ಥಿವೇತನ ಯೋಜನೆಯು ಕಡು ಭದ್ರತೆಯುಳ್ಳ ಸೈಬರ್ ಪ್ಲಾಟ್‌ಫಾರಂನ ಮೂಲಕ ಅನುಷ್ಠಾನವಾಗಲಿದೆ. ಪಾರದರ್ಶಕತೆ, ಉತ್ತರದಾಯಿತ್ವ, ದಕ್ಷತೆ, ಕಾಲಮಿತಿಯಲ್ಲಿ ಪಾವತಿಗೆ ಒತ್ತು ನೀಡಲಾಗುತ್ತದೆ.
* ವಿದ್ಯಾರ್ಥಿಗಳ ಅರ್ಹತೆ, ಜಾತಿ ಪ್ರಮಾಣಪತ್ರ, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ, ನಿರ್ವಹಣೆ ಮಾಡುವ ಹೊಣೆ ರಾಜ್ಯ ಸರ್ಕಾರಗಳದ್ದು
* ಆಧಾರ್ ಆಧರಿತ, ‘ಫಲಾನುಭವಿಗಳಿಗೆ ನೇರ ವರ್ಗಾವಣೆ’ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತದೆ. ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಆರ್ಥಿಕ ನೆರವಿನ ಮೊತ್ತ ಜಮೆಯಾಗಲಿದೆ
* ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಶೇ 40ರಷ್ಟು ಮೊತ್ತವನ್ನು ಜಮೆ ಮಾಡಿದ ನಂತರವಷ್ಟೇ ಕೇಂದ್ರ ಸರ್ಕಾರವು ತನ್ನ ಪಾಲಿನ ಶೇ 60ರಷ್ಟು ಮೊತ್ತವನ್ನು ಜಮೆ ಮಾಡಲಿದೆ
* ವಾರ್ಷಿಕ ಲೆಕ್ಕಪರಿಶೋಧನೆ, ಅರ್ಧವಾರ್ಷಿಕ ಸಾಂಸ್ಥಿಕ ಲೆಕ್ಕಪರಿಶೋಧನೆ ಮತ್ತು ಸಾಮಾಜಿಕ ಸಮೀಕ್ಷೆಯ ಮೂಲಕ ಯೋಜನೆಯ ಅನುಷ್ಠಾನ ಮತ್ತು ಪರಿಣಾಮವನ್ನು ಪರಿಶೀಲಿಸಲಾಗುತ್ತದೆ.

ಡಿಟಿಎಚ್‌ ನಿಯಮ ಬದಲು
ಡೈರೆಕ್ಟ್‌ ಟು ಹೋಂ (ಡಿಟಿಎಚ್‌) ಸೇವೆ ನೀಡುವ ಕಂಪನಿಗಳಿಗೆ 20 ವರ್ಷಗಳ ದೀರ್ಘಾವಧಿಯ ಪರವಾನಗಿ ನೀಡಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಈವರೆಗೆ 10 ವರ್ಷಗಳ ಅವಧಿಗೆ ಪರವಾನಗಿ ನೀಡಲಾಗುತ್ತಿತ್ತು.

ಪರವಾನಗಿ ಶುಲ್ಕದಲ್ಲೂ ಬದಲಾವಣೆ ಮಾಡಿದೆ. ಡಿಟಿಎಚ್ ಸೇವಾ ಕಂಪನಿಗಳು ನಿವ್ವಳ ವರಮಾನದಲ್ಲಿ ಶೇ 10ರಷ್ಟನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿತ್ತು. ಇನ್ನು ಮುಂದೆ ಸೇವಾ ಕಂಪನಿಗಳು ಹೊಂದಿಕೆ ಮಾಡಲಾದ ನಿವ್ವಳ ವರಮಾನದಲ್ಲಿ ಶೇ 8ರಷ್ಟನ್ನು ಮಾತ್ರ ಪರವಾನಗಿ ಶುಲ್ಕವಾಗಿ ಸರ್ಕಾರಕ್ಕೆ ಪಾವತಿ ಮಾಡಬೇಕು.

ಡಿಟಿಎಚ್‌ ಸೇವೆಯಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಈವರೆಗೆ ಶೇ 49ರಷ್ಟು ಎಫ್‌ಡಿಐ ಹೂಡಿಕೆಗೆ ಮಾತ್ರ ಅವಕಾಶವಿತ್ತು. ಈ ಸಂಬಂಧ ಈಗ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತಿದ್ದುಪಡಿ ಮಾಡಲಿದೆ.

ಡಿಟಿಎಚ್ ಸೇವಾ ಕಂಪನಿಗಳು ಪ್ಲಾಟ್‌ಫಾರಂ ಚಾನಲ್‌ಗಳನ್ನು ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಕಂಪನಿಯು ತನ್ನ ಗರಿಷ್ಠ ಸಾಮರ್ಥ್ಯದ ಶೇ 5ರಷ್ಟನ್ನು ಮಾತ್ರ ಪ್ಲಾಟ್‌ಫಾರಂ ಚಾನಲ್‌ಗಳ ಪ್ರಸಾರಕ್ಕೆ ಬಳಸಬಹುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.