ADVERTISEMENT

ವಿಧಾನಸಭೆ ಚುನಾವಣೆ: ಇ–ವೋಟಿಂಗ್ ವ್ಯವಸ್ಥೆ ತರಲು ಚುನಾವಣಾ ಆಯೋಗಕ್ಕೆ ಸಿಎಐಟಿ ಮನವಿ

ಐಎಎನ್ಎಸ್
Published 10 ಜನವರಿ 2022, 7:10 IST
Last Updated 10 ಜನವರಿ 2022, 7:10 IST
ಮತದಾರರು– ಸಾಂದರ್ಭಿಕ ಚಿತ್ರ
ಮತದಾರರು– ಸಾಂದರ್ಭಿಕ ಚಿತ್ರ   

ನವದೆಹಲಿ: ಮತದಾನದ ಹಕ್ಕು ಚಲಾಯಿಸಲು ಇ–ವೋಟಿಂಗ್‌ (ಆನ್‌ಲೈನ್‌ ಮತದಾನ) ವ್ಯವಸ್ಥೆ ಪರಿಚಯಿಸುವಂತೆ ಕೋರಿ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಭಾನುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಆನ್‌ಲೈನ್‌ ಮೂಲಕವೇ ಅಭ್ಯರ್ಥಿಗಳು ನಾಮನಿರ್ದೇಶನ ಸಲ್ಲಿಸಲು ಅವಕಾಶ ನೀಡಿರುವುದು ಸೇರಿದಂತೆ ತಂತ್ರಜ್ಞಾನ ಹಾಗೂ ಅಪ್ಲಿಕೇಷನ್‌ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಚುನಾವಣಾ ಆಯೋಗದ ನಡೆಗೆ ವರ್ತಕರ ಒಕ್ಕೂಟವು ಪ್ರಶಂಸೆ ವ್ಯಕ್ತಪಡಿಸಿದೆ.

'ಚುನಾವಣಾ ಆಯೋಗವು ಇ–ವೋಟಿಂಗ್‌ ವ್ಯವಸ್ಥೆಯನ್ನು ಪರಿಚಯಿಸಬೇಕು. ಅದರಿಂದಾಗಿ ಮತದಾರರು ಜಗತ್ತಿನ ಯಾವುದೇ ಮೂಲೆಯಿಂದ ಇಂಟರ್‌ನೆಟ್‌ ಬಳಸಿ ಯಾವುದೇ ಸಾಧನದ ಮೂಲಕ ಮತದಾನ ನಡೆಸಲು ಸಾಧ್ಯವಾಗುತ್ತದೆ. ಆನ್‌ಲೈನ್‌ ವೋಟಿಂಗ್‌ ತಂತ್ರಾಂಶವನ್ನು ಬಳಕೆ ಮಾಡುವ ಮೂಲಕ ಮತದಾನದ ಗೌಪ್ಯತೆಯನ್ನು ಕಾಪಾಡಬಹುದಾಗುತ್ತದೆ' ಎಂದು ವರ್ತಕರ ಒಕ್ಕೂಟವು ಪತ್ರದಲ್ಲಿ ತಿಳಿಸಿದೆ.

ADVERTISEMENT

ಇ–ವೋಟಿಂಗ್‌ ವ್ಯವಸ್ಥೆ ಅಳವಡಿಸುವ ಮೂಲಕ ಚುನಾವಣೆ ಮತದಾನದ ವೆಚ್ಚವನ್ನೂ ಕಡಿತಗೊಳಿಸಬಹುದು ಎಂದು ಸಲಹೆ ನೀಡಿದೆ.

ಚುನಾವಣಾ ಆಯೋಗವು ಶನಿವಾರ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದೆ. ಫೆಬ್ರುವರಿ 10ರಿಂದ ಮಾರ್ಚ್‌ 7ರವರೆಗೂ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಹಾಗೂ ಪಂಜಾಬ್‌ನಲ್ಲಿ ಚುನಾವಣೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.