ADVERTISEMENT

ಟಿಎಂಸಿ ನಾಯಕ ಅಭಿಷೇಕ್‌ ವಿರುದ್ಧ ಬಲವಂತದ ಕ್ರಮ ಬೇಡ: ಕಲ್ಕತ್ತ ಹೈಕೋರ್ಟ್‌

ಪಶ್ಚಿಮ ಬಂಗಾಳ: ಶಿಕ್ಷಕರ ನೇಮಕಾತಿ ಹಗರಣದ ತನಿಖೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 12:41 IST
Last Updated 22 ಸೆಪ್ಟೆಂಬರ್ 2023, 12:41 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ತೀರ್ಥಂಕರ್ ಘೋಷ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿತು.

ಬ್ಯಾನರ್ಜಿ ವಿರುದ್ಧ ಇ.ಡಿ ದಾಖಲಿಸಿರುವ ಇಸಿಐಆರ್‌ ಅನ್ನು (ಇ.ಡಿ ದಾಖಲಿಸುವ ಇಸಿಐಆರ್‌‌, ಎಫ್‌ಐಆರ್‌ಗೆ ಸಮ) ರದ್ದುಗೊಳಿಸಲು ನಿರಾಕರಿಸಿದ ನ್ಯಾಯಪೀಠ, ಇಸಿಐಆರ್‌ ಆಧರಿಸಿ ಬ್ಯಾನರ್ಜಿ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನಿರ್ದೇಶನ ನೀಡಿತು.

ADVERTISEMENT

‘ಅಭಿಷೇಕ್‌ ಬ್ಯಾನರ್ಜಿ ವಿರುದ್ಧ ಇ.ಡಿ ಸಲ್ಲಿಸಿರುವ ಸಾಕ್ಷ್ಯಗಳು ಅವರ ಬಂಧನಕ್ಕೆ ವಾರಂಟ್‌ ನೀಡುವುದಕ್ಕೆ ಸಾಕಾಗುವುದಿಲ್ಲ’ ಎಂದು ಹೇಳಿದ ನ್ಯಾಯಪೀಠ, ‘ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಬ್ಯಾನರ್ಜಿ ವಿರುದ್ಧ ತನಿಖೆ ಮುಂದುವರಿಯಲಿದೆ’ ಎಂದಿತು.

ವಿಪಕ್ಷಗಳ ಭಿನ್ನ ಪ್ರತಿಕ್ರಿಯೆ: ಈ ವಿಚಾರವಾಗಿ ಕಲ್ಕತ್ತ ಹೈಕೋರ್ಟ್‌ ನೀಡಿರುವ ನಿರ್ದೇಶನವನ್ನು ಟಿಎಂಸಿ ಸ್ವಾಗತಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಸಿಪಿಎಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಈ ಹಗರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆ ಹಾಗೂ ಇತರ ಕಾನೂನಾತ್ಮಕ ವಿಷಯಗಳ ಕುರಿತು ನಾವು ನೇರವಾಗಿ ಹೇಳಿಕೆ ನೀಡುವಂತಿಲ್ಲ. ಬಿಜೆಪಿಯ ಕೋಮು ಹಾಗೂ ದ್ವೇಷದಿಂದ ಕೂಡಿದ ರಾಜಕಾರಣದ ವಿರುದ್ಧ ನಡೆಯುತ್ತಿರುವ ಹೋರಾಟದ ಹಿಂದಿನ ಪ್ರಮುಖ ಶಕ್ತಿಯೆನಿಸಿರುವ ಬ್ಯಾನರ್ಜಿ ಅವರಿಗೆ ಕೇಂದ್ರೀಯ ಸಂಸ್ಥೆಗಳು ಕಿರುಕುಳ ನೀಡುತ್ತಿವೆ ಎಂಬುದನ್ನು ಈ ಆದೇಶ ತೋರಿಸುತ್ತದೆ’ ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಪ್ರತಿಕ್ರಿಯಿಸಿದ್ದಾರೆ.

‘ನ್ಯಾಯಾಲಯವು ಬ್ಯಾನರ್ಜಿ ಅವರನ್ನು ಆರೋಪದಿಂದ ಮುಕ್ತಗೊಳಿಸುವವರೆಗೆ ಪ್ರತಿಯೊಬ್ಬರು ‌ಕಾಯಬೇಕು‘ ಎಂದು ಕಾಂಗ್ರೆಸ್‌ ನಾಯಕ ಅಧೀರ್ ರಂಜನ್‌ ಚೌಧರಿ ಹೇಳಿದ್ದಾರೆ.

‘ಬ್ಯಾನರ್ಜಿ ತಪ್ಪಿತಸ್ಥ ಅಲ್ಲ ಎಂದಾದರೆ, ಅವರಿಗೆ ನ್ಯಾಯಾಲಯದಿಂದ ಇಷ್ಟೊಂದು ಪ್ರಮಾಣದ ರಕ್ಷಾಕವಚದ ಅಗತ್ಯವಿದೆಯೇ’ ಎಂದು ಸಿಪಿಎಂನ ಕೇಂದ್ರೀಯ ಸಮಿತಿ ಸದಸ್ಯ ಸುಜನ್‌ ಚಕ್ರವರ್ತಿ ಪ್ರಶ್ನಿಸಿದ್ದಾರೆ.

‘ಬ್ಯಾನರ್ಜಿ ವಿರುದ್ಧ ತನಿಖೆ ಮುಂದುವರಿಸುವಂತೆ ಇ.ಡಿ ಗೆ ನ್ಯಾಯಾಲಯ ಸೂಚಿಸಿದೆ‘ ಎಂದು ಬಿಜೆಪಿಯ ಹಿರಿಯ ನಾಯಕ ರಾಹುಲ್‌ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್‌ ಬ್ಯಾನರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.