ADVERTISEMENT

29ವಾರದ ಭ್ರೂಣ ಗರ್ಭ‍‍ಪಾತಕ್ಕೆ ಕೋಲ್ಕತ್ತ ಹೈಕೋರ್ಟ್ ಅನುಮತಿ

ಪಿಟಿಐ
Published 18 ಫೆಬ್ರುವರಿ 2019, 13:26 IST
Last Updated 18 ಫೆಬ್ರುವರಿ 2019, 13:26 IST
   

ಕೋಲ್ಕತ್ತ:ನಲವತ್ತೆರಡುವರ್ಷದ ಗರ್ಭಿಣಿಯೊಬ್ಬರಿಗೆ29 ವಾರದ ಭ್ರೂಣದ ಗರ್ಭಪಾತ ಮಾಡಿಸಿಕೊಳ್ಳಲು ಕೋಲ್ಕತ್ತ ಹೈಕೋರ್ಟ್ ಸೋಮವಾರಅನುಮತಿ ನೀಡಿದೆ.

ಭ್ರೂಣ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದು, ಶಿಶು ಜನಿಸಿದಲ್ಲಿ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಒತ್ತಡ ಉಂಟಾಗುತ್ತದೆ ಎಂದು ಮಹಿಳೆ ಗರ್ಭಪಾತಕ್ಕೆ ಮನವಿ ಸಲ್ಲಿಸಿದ್ದರು.

ಮನವಿ ಪರಿಗಣಿಸಿದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಬಿ ಸೊಮದ್ದರ್ ನೇತೃತ್ವದ ನ್ಯಾಯಪೀಠ, ಜನಿಸದೆ ಇರುವ ಶಿಶುವಿನ ಜತೆಗೆ ತಾಯಿಗೆ ಸಹ ಘನತೆಯಿಂದ ಜೀವಿಸುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ರಾಜ್ಯ ಸರ್ಕಾರ ನೇಮಿಸಿದ್ದ ವೈದ್ಯಕೀಯ ಸಮಿತಿ ನೀಡಿರುವ ವರದಿಯಲ್ಲಿ, ‘ಈ ಶಿಶು ಜನಿಸಿದಲ್ಲಿ ಅನ್ನನಾಳ,ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚಿದೆ’ ಎಂದು ಉಲ್ಲೇಖಿಸಲಾಗಿದೆ.

‘ಶಿಶು ಜನಿಸಿದಲ್ಲಿ ದೀರ್ಘಾವಧಿ ಚಿಕಿತ್ಸೆ ಹಾಗೂ ವಿಶೇಷ ಕಾಳಜಿ ಬೇಕಾಗುತ್ತದೆ. ಆದರೆ ಫಲಿತಾಂಶ ಅನಿಶ್ಚಿತ ಎಂದು ವರದಿಯಲ್ಲಿ ಹೇಳಲಾಗಿದೆ’ ಎಂದು ಮಹಿಳೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮಹಿಳೆಗೆ ಆರ್ಥಿಕ ಹಾಗೂ ವೈದ್ಯಕೀಯ ನೆರವು ನೀಡಲು ಮುಂದಾಗಿಲ್ಲ ಎನ್ನುವುದನ್ನು ಉಲ್ಲೇಖಿಸಿರುವ ನ್ಯಾಯಪೀಠ, ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಗೆ ಅವಕಾಶ ಕಲ್ಪಿಸಿದೆ.

ಗರ್ಭಪಾತ ಕಾಯ್ದೆ ಅನುಸಾರ 20 ವಾರದ ಅಥವಾ ನಂತರದ ಭ್ರೂಣ ತೆಗೆಸಲು ಹೈಕೋರ್ಟ್ ಅನುಮತಿ ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.