ADVERTISEMENT

ಕೇಂದ್ರೀಯ ವಿದ್ಯಾಲಯದಲ್ಲಿ ಸಂಸದರ ಕೋಟಾ: ಚರ್ಚೆ ಬಳಿಕವೇ ಅಂತಿಮ ತೀರ್ಮಾನ

ಪಿಟಿಐ
Published 30 ಮಾರ್ಚ್ 2022, 11:37 IST
Last Updated 30 ಮಾರ್ಚ್ 2022, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ (ಕೆ.ವಿ) ಹಾಲಿ ಇರುವ ‘ಸಂಸದರ ಕೋಟಾ’ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ಎಲ್ಲ ಸಂಸದರ ಜೊತೆಗೆ ಚರ್ಚಿಸಿದ ಬಳಿಕ ತೀರ್ಮಾನಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಸ್ತುತ, ಸಂಸತ್‌ ಸದಸ್ಯರು ಆಯಾ ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ 10 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಂತೆ ಶಿಫಾರಸು ಮಾಡಬಹುದು.

ರಾಜ್ಯಸಭೆಯಲ್ಲಿ ಈ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣಾ ದೇವಿ, ಕೋಟಾ ಪದ್ಧತಿ ಕುರಿತು ಸಂಸದರ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದರು.

ADVERTISEMENT

ಕೋಟಾ ವ್ಯವಸ್ಥೆ ರದ್ದುಪಡಿಸುವ ಅಥವಾ ಶಿಫಾರಸು ಮಾಡಲು ಇರುವ ಸಂಖ್ಯೆ ಹೆಚ್ಚಿಸುವ ಕುರಿತು ಎಲ್ಲ ಸಂಸದರ ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಿಗೆ ಇರುವ ಕೋಟಾ ಪದ್ಧತಿ ಮುಂದುವರಿಸಲಾಗುವುದೇ ಎಂದು ಬಿಜೆಪಿಯ ಸುಶೀಲ್‌ ಕುಮಾರ್ ಮೋದಿ ಪ್ರಶ್ನಿಸಿದರೆ, ಎಎಪಿಯ ಸಂಜಯ್‌ ಸಿಂಗ್ ಅವರು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ದೇಶದ ವಿವಿಧೆಡೆ ಒಟ್ಟು 1,248 ಕೇಂದ್ರೀಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 14.35 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.