ADVERTISEMENT

ನಾನು ಯಾಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿ?: ಬಾಬಾ ರಾಮದೇವ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2018, 13:52 IST
Last Updated 16 ಸೆಪ್ಟೆಂಬರ್ 2018, 13:52 IST
ರಾಮದೇವ್
ರಾಮದೇವ್    

ನವದೆಹಲಿ: ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸದೇ ಇದ್ದರೆ ನರೇಂದ್ರ ಮೋದಿ ಸರ್ಕಾರಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಯೋಗ ಗುರು ಬಾಬಾ ರಾಮ ದೇವ್ ಎಚ್ಚರಿಕೆ ನೀಡಿದ್ದಾರೆ.ಮುಂದಿನ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಹೇಳಿದ ರಾಮದೇವ್, ನನಗೆ ಅವಕಾಶ ನೀಡಿದರೆ ಪೆಟ್ರೋಲ್ ಮತ್ತು ಡೀಸೆಲ್‍ನ್ನು ಈಗಿರುವ ಬೆಲೆಯ ಅರ್ಧ ಬೆಲೆಗೆ ಮಾರುವುದಾಗಿ ಹೇಳಿದ್ದಾರೆ.

2015ರಲ್ಲಿ ರಾಮದೇವ್ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿದ್ದರು.ಅದರ ನಂತರದ ವರ್ಷದಲ್ಲಿ ಅವರನ್ನು ಹರ್ಯಾಣದ ರಾಯಭಾರಿಯನ್ನಾಗಿ ಮಾಡಿ ಸಂಪುಟ ಸಚಿವರ ದರ್ಜೆಯ ಅನುಕೂಲಗಳನ್ನು ನೀಡುವುದರ ಜತೆಗೆ ಕೆಂಪುಗೂಟದ ಕಾರು, ರಕ್ಷಣಾ ಸಿಬ್ಬಂದಿ ಮತ್ತು ಬೆಂಗಾವಲು ವಾಹನಗಳನ್ನೂ ನೀಡಲಾಗಿತ್ತು.

ಇದೀಗ ನೀವು ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಿಳಿಯುತ್ತೀರಾ? ಎಂದು ಕೇಳಿದರೆ ನಾನು ಯಾಕೆ ಪ್ರಚಾರ ಮಾಡಬೇಕು ಎಂದು ಉತ್ತರಿಸಿದ್ದಾರೆ ರಾಮದೇವ್.

ADVERTISEMENT

ನಾನು ಈಗ ರಾಜಕೀಯದಿಂದ ದೂರ ಸರಿದಿದ್ದೇನೆ.ನಾನು ಎಲ್ಲ ಪಕ್ಷದವರೊಂದಿಗೆ ಇದ್ದೇನೆ ಆದರೆ ನಾನು ಯಾವ ಪಕ್ಷದೊಂದಿಗೂ ಇಲ್ಲ ಎಂದು ಎನ್‍ಡಿಟಿವಿ ಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರುಹೇಳಿದ್ದಾರೆ.
ಯಾವುದೇ ಕಾರಣ, ವಿವರಣೆ ನೀಡದೆಯೇ ಪ್ರಧಾನಿ ಮೋದಿಯವರನ್ನು ಟೀಕಿಸುವುದು ನಮ್ಮ ಹಕ್ಕು ಎಂದು ಹೇಳಿದ ಬಾಬಾ, ಮರುಗಳಿಗೆಯಲ್ಲಿಯೇ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡಿದ್ದಾರೆ.ಸ್ವಚ್ಛ ಭಾರತ ಅಭಿಯಾನವನ್ನು ಮಾಡಿದ್ದಾರೆ. ಯಾವುದೇ ದೊಡ್ಡ ಹಗರಣಗಳನ್ನು ಮಾಡಲು ಬಿಡಲಿಲ್ಲ ಎಂದಿದ್ದಾರೆ.
ಸರ್ಕಾರ ಇಂಧನಕ್ಕೂ ಜಿಎಸ್‍ಟಿ ಅನ್ವಯ ಮಾಡಬೇಕು. ಆದರೆ ತೆರಿಗೆ ಶೇ.28ಕ್ಕಿಂತ ಹೆಚ್ಚಿರಬಾರದು.ಆದಾಯದಲ್ಲಿನ ನಷ್ಟ ದೇಶದ ಪ್ರಗತಿಯನ್ನು ಬಾಧಿಸಬಾರದು.ಶ್ರೀಮಂತರ ಮೇಲೆ ನಾವು ತೆರಿಗೆ ಹಾಕಬೇಕು ಎಂದ ಬಾಬಾ ಅವರಲ್ಲಿ
ಅದು ಹೇಗೆ ನೀವು ಪೆಟ್ರೋಲ್ ದರವನ್ನು ಕಡಿಮೆ ಮಾಡುತ್ತೀರಿ ಎಂದು ಕೇಳಿದಾಗ, ಸರ್ಕಾರ ನನಗೆ ಅವಕಾಶ ನೀಡಿದರೆ ಮತ್ತು ತೆರಿಗೆಯಲ್ಲಿ ಕಡಿತ ಮಾಡಿದರೆ ನಾನು ಪೆಟ್ರೋಲ್, ಡೀಸೆಲ್ ಲೀಟರ್‌ಗೆ ₹30-₹40 ಮಾಡಬಲ್ಲೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.