ADVERTISEMENT

ಎನ್‌ಸಿಡಿ, ಕ್ಯಾನ್ಸರ್‌ ಪತ್ತೆಗೆ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ

ಮಾರ್ಚ್‌ 30ರವರೆಗೆ ದೇಶದಾದ್ಯಂತ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 15:44 IST
Last Updated 20 ಫೆಬ್ರುವರಿ 2025, 15:44 IST
<div class="paragraphs"><p>ಕೇಂದ್ರ ಆರೋಗ್ಯ ಸಚಿವಾಲಯ</p></div>

ಕೇಂದ್ರ ಆರೋಗ್ಯ ಸಚಿವಾಲಯ

   

ನವದೆಹಲಿ: ಸಾಂಕ್ರಾಮಿಕವಲ್ಲದ ರೋಗಗಳು (ಎನ್‌ಸಿಡಿ) ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು 30 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದ ಎಲ್ಲರನ್ನು ಪರೀಕ್ಷಿಸಲು ಕೇಂದ್ರ ಆರೋಗ್ಯ ಸಚಿವಾಲಯವು ವಿಶೇಷ ತಪಾಸಣಾ ಅಭಿಯಾನವನ್ನು ಗುರುವಾರದಿಂದ  ಪ್ರಾರಂಭಿಸಿದೆ.

ಇದೇ 20ರಿಂದ ಆರಂಭಿಸಿರುವ ತಪಾಸಣೆ ಅಭಿಯಾನ ಮಾರ್ಚ್ 30ರವರೆಗೆ ಆಯುಷ್ಮಾನ್ ಆರೋಗ್ಯ ಮಂದಿರಗಳು (ಎಎಎಂಗಳು) ಮತ್ತು ರಾಷ್ಟ್ರವ್ಯಾಪಿ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ. ಈ ಅಭಿಯಾನ ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ (ಎನ್‌ಪಿ-ಎನ್‌ಸಿಡಿ) ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ADVERTISEMENT

ಎನ್‌ಸಿಡಿಗಳು ಮತ್ತು ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಅಲ್ಲದೆ, ಈ ಉಪಕ್ರಮವು ಆರೋಗ್ಯ ವೆಚ್ಚ ತಗ್ಗಿಸಲಿದೆ ಮತ್ತು ರಾಷ್ಟ್ರದಾದ್ಯಂತದ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದು ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಬಿಪಿ ಮಾನಿಟರ್‌ಗಳು, ಗ್ಲುಕೋಮೀಟರ್‌ಗಳು ಮತ್ತು ಔಷಧಗಳು ಸೇರಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳಲಿವೆ. ಅಭಿಯಾನದ ಭಾಗವಾಗಿ, ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಮತ್ತು ಮುಂಚೂಣಿ ಕಾರ್ಯಕರ್ತರು ಖುದ್ದು ಪ್ರತಿ ಮನೆಗಳಿಗೆ ಭೇಟಿ ನೀಡಿ, ಅಭಿಯಾನದ ಗುರಿಸಾಧನೆಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.