ADVERTISEMENT

ಗುಜರಾತ್‌ ಚುನಾವಣೆ: ಮೊದಲ ಹಂತದ ಮತದಾನ, ಬಹಿರಂಗ ಪ್ರಚಾರ ಅಂತ್ಯ

ಪಿಟಿಐ
Published 29 ನವೆಂಬರ್ 2022, 16:22 IST
Last Updated 29 ನವೆಂಬರ್ 2022, 16:22 IST
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಿಜೆಪಿ ಪರವಾಗಿ ಅಹಮದಾಬಾದ್‌ನಲ್ಲಿ ಮಂಗಳವಾರ ಮನೆ ಮನೆ ಪ್ರಚಾರ ನಡೆಸಿದರು ಪಿಟಿಐ ಚಿತ್ರ
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬಿಜೆಪಿ ಪರವಾಗಿ ಅಹಮದಾಬಾದ್‌ನಲ್ಲಿ ಮಂಗಳವಾರ ಮನೆ ಮನೆ ಪ್ರಚಾರ ನಡೆಸಿದರು ಪಿಟಿಐ ಚಿತ್ರ   

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ಮೊದಲ ಹಂತದಲ್ಲಿ ಡಿ.1ರಂದು ಮತದಾನ ನಡೆಯಲಿರುವ 89 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ದಕ್ಷಿಣ ಗುಜರಾತ್‌ ಮತ್ತು ಕಛ್‌–ಸೌರಾಷ್ಟ್ರದ 19 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಸಾಂಪ್ರದಾಯಿಕವಾಗಿ ಈ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇತ್ತು. ಈ ಬಾರಿ ಆಮ್‌ ಆದ್ಮಿ ಪಕ್ಷ ಕೂಡ ಕಣದಲ್ಲಿ ಇದೆ. ಪಕ್ಷವು 182 ಕ್ಷೇತ್ರಗಳ ಪೈಕಿ 181ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಹಾಗಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪ‍ಡುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಈಸುದಾನ್‌ ಗಢವಿ, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಪುರುಷೋತ್ತಮ ಸೋಲಂಕಿ, ಆರು ಬಾರಿ ಗೆದ್ದಿರುವ ಕುನ್ವರ್‌ಜಿ ಬಾವಲಿಯಾ, ಮೊರ್ಬಿ ‘ಹೀರೊ’ ಕಾಂತಿಲಾಲ್‌ ಅಮೃತಿಯಾ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಹೆಂಡತಿ ರಿವಾ ಮತ್ತು ಗುಜರಾತ್‌ ಎಎಪಿ ಘಟಕದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ ಅವರು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಕಣದಲ್ಲಿರುವ ಪ್ರಮುಖರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂತಾದ ಮುಖಂಡರು ಪ್ರಚಾರ ನಡೆಸಿದ್ದಾರೆ. ಎಎಪಿ, ಸಂಚಾಲಕ ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ಅಬ್ಬರದ ಪ್ರಚಾರ ನಡೆಸಿದೆ. ಬಿಜೆಪಿಗೆ ತಾನೇ ಪ್ರತಿಸ್ಪರ್ಧಿ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದೆ. ಮನೆ ಮನೆ ಪ್ರಚಾರಕ್ಕೆ ಕಾಂಗ್ರೆಸ್ ಹೆಚ್ಚು ಒತ್ತು ನೀಡಿದೆ.

788 ಅಭ್ಯರ್ಥಿಗಳ ಪೈಕಿ 70 ಮಹಿಳೆಯರಿದ್ದರೆ 718 ಪುರುಷರು. ಮಾಯಾವತಿ ನೇತೃತ್ವದ ಬಿಎಸ್‌ಪಿ 57 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಭಾರತೀಯ ಟ್ರೈಬಲ್‌ ಪಾರ್ಟಿಯು 14 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದೆ. ಸಮಾಜವಾದಿ ಪಕ್ಷ 12, ಸಿಪಿಎಂ ನಾಲ್ಕು, ಸಿಪಿಐ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. 339 ಮಂದಿ ಪಕ್ಷೇತರರೂ ಇದ್ದಾರೆ.

ಎರಡನೇ ಹಂತದ ಮತದಾನವು ಡಿ.5ರಂದು ನಡೆಯಲಿದೆ. ಮತ ಎಣಿಕೆ ಡಿ. 8ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.