ADVERTISEMENT

ಕಾಂಗ್ರೆಸ್‌ನಲ್ಲಿ ಇರುವುದಿಲ್ಲ, ಬಿಜೆಪಿ ಸೇರುವುದಿಲ್ಲ: ಅಮರಿಂದರ್‌ ಸಿಂಗ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2021, 16:54 IST
Last Updated 30 ಸೆಪ್ಟೆಂಬರ್ 2021, 16:54 IST
ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಅವರು ಬುಧವಾರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಸಂದರ್ಭ. ಪಿಟಿಐ ಚಿತ್ರ
ಮಾಜಿ ಸಿಎಂ ಅಮರಿಂದರ್‌ ಸಿಂಗ್‌ ಅವರು ಬುಧವಾರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಸಂದರ್ಭ. ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್‌ನಲ್ಲಿ ಇರುವುದಿಲ್ಲ, ಆದರೆ ಬಿಜೆಪಿ ಸೇರುವುದಿಲ್ಲ ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಗುರುವಾರ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಮರುದಿನ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕು ತಿಂಗಳಲ್ಲಿ ಪಂಜಾಬ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ನಾಯಕತ್ವದ ಮೇಲೆ ಆಕ್ರೋಶ ಹೊರಹಾಕಿದ ಅಮರಿಂದರ್, ಹಿರಿಯರನ್ನು ಪಕ್ಷ ಕಡೆಗಣಿಸುತ್ತಿದ್ದು, ದನಿಯೇ ಇಲ್ಲದಂತಾಗಿದೆ. ಹೀಗಾಗಿ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ಧಾರೆ.

ADVERTISEMENT

‘ನಾನು ರಾಜೀನಾಮೆ ನೀಡುತ್ತೇನೆ. ನಾನು ಪಕ್ಷದಲ್ಲಿ ಉಳಿಯಲಾರೆ’ ಎಂದಿರುವ ಅವರು, ತಮ್ಮ ಟ್ವಿಟರ್‌ ಖಾತೆಯಲ್ಲಿ ಕಾಂಗ್ರೆಸ್ ಬಗೆಗಿನ ಉಲ್ಲೇಖವನ್ನು ತೆಗೆದುಹಾಕಿದ್ದಾರೆ.

‘ಪಕ್ಷಕ್ಕಾಗಿ ಐದು ದಶಕಗಳಿಂದ ಕೆಲಸ ಮಾಡಿದ ನಂತರವೂ ನನ್ನ ವಿಶ್ವಾಸಾರ್ಹತೆಯನ್ನು ಅನುಮಾನಿಸುವ ಹಾಗೂನನ್ನನ್ನು ನಂಬದ ಪಕ್ಷದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಅವರು ಹೇಳಿದರು.

ಅಮರಿಂದರ್ ಅವರು ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗಿನ 50 ನಿಮಿಷಗಳ ಸಭೆಯಲ್ಲಿ ರೈತರ ಆಂದೋಲನದ ಬಗ್ಗೆ ಅಮರಿಂದರ್ ಚರ್ಚಿಸಿದರು. ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೊಳಿಸಿ ಬಿಕ್ಕಟ್ಟು ಪರಿಹರಿಸುವಂತೆ ಒತ್ತಾಯಿಸಿದರು.

ಅಮರಿಂದರ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಚರ್ಚಿಸಿದರು. ಮಾಜಿ ಸೇನಾ ಅಧಿಕಾರಿ ಅಮರಿಂದರ್ ಅವರಿಗೆ ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಕುರಿತು ಹೆಚ್ಚಿನ ಕಳಕಳಿ ಇದೆ. ಅಮರಿಂದರ್ ಅವರ ಈ ಗುಣ ರಾಷ್ಟ್ರೀಯ ಭದ್ರತೆ ಕುರಿತು ಮಾತನಾಡುವ ಎನ್‌ಡಿಎ ಸರ್ಕಾರದ ಕಾರ್ಯವಿಧಾನಕ್ಕೆ ಹೋಲುತ್ತದೆ ಎಂಬ ವಿಶ್ಲೇಷಣೆ ಇದೆ.

ಸಿಧು ಅವರ ನಡೆಯನ್ನು ಟೀಕಿಸಿರುವ ಅಮರಿಂದರ್, ಅವರೊಬ್ಬ ಅಪ್ರಬುದ್ಧ ಮತ್ತು ಅಸ್ಥಿರ ವ್ಯಕ್ತಿ ಎಂದಿದ್ದಾರೆ. ‘ಸಿಧು ಸ್ಥಿರ ಮನಸ್ಸಿನ ವ್ಯಕ್ತಿಯಲ್ಲ ಎಂದು ನಾನು ಪದೇ ಪದೇ ಹೇಳಿದ್ದೇನೆ. ಆತ ತಂಡದ ಆಟಗಾರನಲ್ಲ, ಆತನದ್ದು ಏಕಾಂಗಿ ವ್ಯಕ್ತಿತ್ವ. ಹೀಗಿರುವಾಗ ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿ ಅದನ್ನು ಹೇಗೆ ನಿಭಾಯಿಸುತ್ತಾರೆ? ಪಕ್ಷವನ್ನು ಮುನ್ನಡೆಸಬೇಕಾದರೆ, ತಂಡದ ಆಟಗಾರನಾಗಿರಬೇಕು. ಆದರೆ ಸಿಧು ಆ ರೀತಿ ಇಲ್ಲ’ ಎಂದು ವಿವರಿಸಿದರು.

ಹೊಸ ಪಕ್ಷ?:ಮೂಲಗಳ ಪ್ರಕಾರ, ಅಮರಿಂದರ್ ಅವರು ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಿದ್ದು, ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅದು ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.