ADVERTISEMENT

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅಸ್ಸಾಂ ಸಿಎಂ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 8:22 IST
Last Updated 16 ಫೆಬ್ರುವರಿ 2022, 8:22 IST
ಹಿಮಂತ ಬಿಸ್ವ ಶರ್ಮಾ - ಪಿಟಿಐ ಚಿತ್ರ
ಹಿಮಂತ ಬಿಸ್ವ ಶರ್ಮಾ - ಪಿಟಿಐ ಚಿತ್ರ   

ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶರ್ಮಾ ವಿರುದ್ಧ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 504, 505 (2)ರ ಅನ್ವಯ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಿಪಿಸಿಸಿ ಅಧ್ಯಕ್ಷ, ಸಂಸದ ಮಲ್ಕಾಜ್‌ಗಿರಿ ಎ ರೇವಂತ್ ರೆಡ್ಡಿ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಫೆಬ್ರುವರಿ 11ರಂದು ಉತ್ತರಾಖಂಡದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಹಿಮಂತ ಬಿಸ್ವ ಶರ್ಮಾ, ಭಾರತೀಯ ಸೇನೆಯು ನಡೆಸಿದ್ದ ನಿರ್ದಿಷ್ಟ ದಾಳಿಗೆ (ಸರ್ಜಿಕಲ್ ಸ್ಟ್ರೈಕ್) ಸಾಕ್ಷ್ಯ ಕೇಳಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ ಎಂದು ಪ್ರಶ್ನಿಸಿದ್ದರು.

ಬಿಸ್ವ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧೆಡೆ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.