ಸುಪ್ರೀಂ ಕೋರ್ಟ್, ನ್ಯಾ. ಯಶವಂತ ವರ್ಮಾ
ನವದೆಹಲಿ: ತಮ್ಮ ನಿವಾಸದಲ್ಲಿ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿಗಳ ಸಮಿತಿಯ ವರದಿಯನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ನಿವಾಸದಲ್ಲಿ ನಗದು ಪತ್ತೆಯಾಗಿರುವ ಪ್ರಕರಣದಲ್ಲಿ ಯಶವಂತ ವರ್ಮಾ ಅವರು ತಪ್ಪಿತಸ್ಥರು ಎಂದು ಸಮಿತಿ ಹೇಳಿತ್ತು. ಈ ಪ್ರಕರಣದಲ್ಲಿ ಸಂಸತ್ತು ನ್ಯಾ. ವರ್ಮಾ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ, ಪದಚ್ಯುತಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಹಿಂದಿನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಒತ್ತಾಯಿಸಿದ್ದರು. ಇದನ್ನು ರದ್ದುಗೊಳಿಸಬೇಕು ಎಂದು ವರ್ಮಾ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ಜುಲೈ 21ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವರ್ಮಾ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ, ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
‘ಪ್ರಕರಣದ ತನಿಖೆ ನಡೆಸಿದ ಸಮಿತಿಯು ತನ್ನನ್ನು ನಿರ್ದೋಷಿ ಎಂದು ಸಾಬೀತು ಮಾಡಲು ಸಾಕ್ಷಿಗಳನ್ನು ಕೇಳಿಲ್ಲ, ಅವಕಾಶ ನೀಡಿಲ್ಲ. ಸತ್ಯಶೋಧನಾ ಸಮಿತಿಯ ವರದಿಯು ಪೂರ್ವನಿರ್ಧಾರಿತವಾಗಿದೆ. ತನಿಖೆಯು ಪಾರದರ್ಶಕವಾಗಿ ನಡೆದಿಲ್ಲ’ ಎಂದು ವರ್ಮಾ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ವರ್ಮಾ ಅವರ ಅರ್ಜಿಯು ಇನ್ನಷ್ಟು ವಿಚಾರಣೆಗೆ ಬರಬೇಕಿದೆ.
ನ್ಯಾ. ವರ್ಮಾ ಮತ್ತವರ ಕುಟುಂಬದವರು ರಹಸ್ಯ ಕೊಠಡಿಯೊಂದರ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಧ ಸುಟ್ಟ ನೋಟುಗಳು ಪತ್ತೆಯಾಗಿವೆ. ಇದರಲ್ಲಿ ಕೃತ್ಯ ಸಾಬೀತಾಗಿದ್ದು, ಅವರನ್ನು ಕರ್ತವ್ಯದಿಂದ ವಜಾಗೊಳಿಸಲು ಇದು ಸಾಕು ಎಂದು ಹೇಳಲಾಗಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಶೀಲ್ ನಾಗು ಅವರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ತನಿಖೆ ನಡೆಯಿತು. 55 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಘಟನಾ ಸ್ಥಳಕ್ಕೂ ಈ ಸಮಿತಿ ಭೇಟಿ ನೀಡಿತ್ತು.
ಮಾರ್ಚ್ 14ರಂದು ಬೆಳಿಗ್ಗೆ 11.35ರ ಸುಮಾರಿಗೆ ನ್ಯಾ. ವರ್ಮಾ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಅಪಾರ ಪ್ರಮಾಣದ ನಗದು ಇರುವುದನ್ನು ಪತ್ತೆ ಮಾಡಿದ್ದರು. ಇದು ವ್ಯಾಪಕವಾಗಿ ಹರಿದಾಡಿತು. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ಕುರಿತು ತನಿಖೆಗೆ ಆಗ್ರಹಿಸಿದ್ದರು.
ಘಟನೆ ನಡೆದ ಸಂದರ್ಭದಲ್ಲಿ ವರ್ಮಾ ಅವರು ದಹೆಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. ನಂತರ ಅವನ್ನು ಅಲಹಾಬಾದ್ ಹೈಕೋರ್ಟ್ ವರ್ಗಾಯಿಸಲಾಗಿತ್ತು.
ಸಮಿತಿಯ ವರದಿಯನ್ನು ಆಧರಿಸಿ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ವಾಗ್ದಂಡನೆಗೆ ಶಿಫಾರಸು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯಸಭಾ ಸಂಸದ ಬ್ರಿಜ ಲಾಲ್ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಮಿತಿಯೂ ವಿಚಾರಣೆ ನಡೆಸಿತ್ತು. ಸಮಿತಿ ಎದುರು ಹಾಜರಾದ ನ್ಯಾಯ ಇಲಾಖೆಯ ಕಾರ್ಯದರ್ಶಿ ಘಟನೆಯ ಮಾಹಿತಿ ನೀಡಿದ್ದರು.
ಈ ಪ್ರಕರಣವು ನ್ಯಾಯಾಂಗ ಕುರಿತಂತೆ ಆತಂಕ ಮೂಡುವಂತೆ ಮಾಡಿದೆ. ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳಿಗೆ ಸಂಬಂಧಿಸಿ ನೀತಿ ಸಂಹಿತೆ ರೂಪಿಸಬೇಕು. ಇದಕ್ಕಾಗಿ ಸಮಗ್ರ ಮಸೂದೆಯೊಂದರ ಅಗತ್ಯವಿದೆ ಎಂಬುದಾಗಿ ಸಮಿತಿ ಸದಸ್ಯರು ಪ್ರತಿಪಾದಿಸಿದ್ದರು.
ನ್ಯಾಯಮೂರ್ತಿ ವರ್ಮಾ ನಿವಾಸದಲ್ಲಿ ನಗದು ವಶಪಡಿಸಿಕೊಂಡಿರುವುದು ಸತ್ಯ ಎಂಬುದಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿಗಳ ಸಮಿತಿ ಹೇಳಿದೆ. ಹಾಗಾಗಿ, ನ್ಯಾಯಮೂರ್ತಿ ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿ ಸರ್ಕಾರ ಗೊತ್ತುವಳಿ ಮಂಡಿಸಬೇಕಿತ್ತು ಎಂದು ಸಮಿತಿಯ ಕೆಲ ಸದಸ್ಯರು ಹೇಳಿದ್ದರು.
ನಿವೃತ್ತಿ ನಂತರ ಐದು ವರ್ಷ ಪೂರ್ಣಗೊಳ್ಳುವವರೆಗೆ ನ್ಯಾಯಮೂರ್ತಿಗಳು ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು
ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಲೆಕ್ಕಪತ್ರವಿಲ್ಲದ ನಗದು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವೇಕೆ?
ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವ ಕುರಿತ ಗೊತ್ತುವಳಿ ಮಂಡನೆ ಮಾಡಿಲ್ಲ ಏಕೆ?
ಸಣ್ಣ ಪ್ರಮಾಣದ ಭ್ರಷ್ಟಾಚಾರದಲ್ಲಿ ಸರ್ಕಾರಿ ನೌಕರ ತನ್ನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆದರೆ, ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ನಿವಾಸದಲ್ಲಿ ಲೆಕ್ಕಪತ್ರ ಇಲ್ಲದ ನಗದು ವಶಪಡಿಸಿಕೊಂಡಿದ್ದರೂ, ಕ್ರಮ ಜರುಗಿಸಿಲ್ಲ ಏಕೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.