ADVERTISEMENT

ನ್ಯಾ. ವರ್ಮಾ ಮನೆಯಲ್ಲಿ ಹಣ ಪತ್ತೆ ಪ್ರಕರಣ: ರಾಷ್ಟ್ರಪತಿ, ಪ್ರಧಾನಿಗೆ ಸಿಜೆಐ ಪತ್ರ

ಪಿಟಿಐ
Published 8 ಮೇ 2025, 15:21 IST
Last Updated 8 ಮೇ 2025, 15:21 IST
ಸಂಜೀವ್‌ ಖನ್ನಾ
ಸಂಜೀವ್‌ ಖನ್ನಾ   

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ನಿವಾಸದಲ್ಲಿ ನೋಟುಗಳ ಕಂತೆ ಪತ್ತೆಯಾದ ಪ್ರಕರಣದ ತನಿಖಾ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರಿಗೆ ಸಿಜೆಐ ಸಂಜೀವ್ ಖನ್ನಾ ಕಳುಹಿಸಿದ್ದಾರೆ. ಇದರ ಜತೆಗೆ ವರ್ಮಾ ಅವರು ವರದಿ ಕುರಿತಂತೆ ನೀಡಿರುವ ಲಿಖಿತ ಪ್ರತಿಕ್ರಿಯೆಯನ್ನೂ ಸೇರಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ತಿಳಿಸಿದೆ.

ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲು ವರದಿಯಲ್ಲಿ ಸೂಚಿಸಲಾಗಿದೆ ಎಂಬುದು ಬಹಿರಂಗಗೊಂಡಿಲ್ಲ. ಆದಾಗ್ಯೂ, ವರ್ಮಾ ಅವರನ್ನು ಪದಚ್ಯುತಿಗೊಳಿಸಲು ವರದಿ ಉಲ್ಲೇಖಿಸಿರಬಹುದು ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಜತೆಗೆ ವರ್ಮಾ ಅವರು ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ ಎಂಬುದೂ ತಿಳಿದುಬಂದಿಲ್ಲ. ಆದರೆ, ಅವರ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧಾವಾಲಿಯಾ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನೊಳಗೊಂಡ ಸಮಿತಿಯು ಈ ಪ್ರಕರಣದ ಸಾಕ್ಷ್ಯಗಳನ್ನು ಪರಿಶೀಲಿಸಿ, ಮೇ4ರಂದು ತನಿಖಾ ವರದಿ ಸಲ್ಲಿಸಿತ್ತು. 50ಕ್ಕೂ ಅಧಿಕ ಮಂದಿಯ ಹೇಳಿಕೆಗಳನ್ನು ಈ ವರದಿ ಒಳಗೊಂಡಿದೆ.

ADVERTISEMENT

Cut-off box - ವರ್ಮಾ ವಾಗ್ದಂಡನೆಗೆ ಸಿಜೆಐ ಶಿಫಾರಸು? ನ್ಯಾಯಮೂರ್ತಿ ವರ್ಮಾ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಕೇಂದ್ರ ಸರ್ಕಾರಕ್ಕೆ ಸಿಜೆಐ ಖನ್ನಾ ಶಿಫಾರಸು ಮಾಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳ ಮೇಲಿನ ಯಾವುದೇ ಆರೋಪವನ್ನು ತನಿಖಾ ಸಮಿತಿ ದೃಢೀಕರಿಸಿದಲ್ಲಿ ಅದನ್ನು ಪರಿಶೀಲಿಸುವ ಸಿಜೆಐ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ರಾಜೀನಾಮೆ ನೀಡುವಂತೆ ಅಥವಾ ಸ್ವಯಂ ನಿವೃತ್ತಿ ಪಡೆಯುವಂತೆ ಕೇಳುತ್ತಾರೆ. ನ್ಯಾಯಮೂರ್ತಿ ಒಪ್ಪದೇ ಇದ್ದಲ್ಲಿ ಮುಂದಿನ ಕ್ರಮಕ್ಕಾಗಿ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರಿಗೆ ಮಾಹಿತಿ ನೀಡುತ್ತಾರೆ. ಇದೀಗ ರಾಷ್ಟ್ರಪತಿ ಮುರ್ಮು ಹಾಗೂ ಪ್ರಧಾನಿ ಮೋದಿ ಅವರಿಗೆ ಸಿಜೆಐ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ವರ್ಮಾ ಅವರು ವಾಗ್ದಂಡನೆಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.