ನವದೆಹಲಿ: ‘ಮನೆಯಲ್ಲಿ ನಗದು ಪತ್ತೆ ವಿವಾದ ಕುರಿತಂತೆ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸುವ ಕೇಂದ್ರ ಸರ್ಕಾರದ ಉದ್ದೇಶವು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ನಿಯಂತ್ರಣ ಹೊಂದುವುದೇ ಆಗಿದೆ’ ಎಂದು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಈಗಿರುವ ಕೊಲಿಜಿಯಂ ವ್ಯವಸ್ಥೆ ರದ್ದುಪಡಿಸಿ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಅಸ್ತಿತ್ವಕ್ಕೆ ತರುವ ಮೂಲಕ ನ್ಯಾಯಮೂರ್ತಿಗಳ ನೇಮಕದಲ್ಲಿ ನಿಯಂತ್ರಣ ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ದೂರಿದ್ದಾರೆ.
ಹಿರಿಯ ವಕೀಲರೂ ಆದ ಸಿಬಲ್, ‘ನ್ಯಾಯಮೂರ್ತಿಗಳಾದ ಯಶವಂತ ವರ್ಮಾ, ಶೇಖರ್ ಯಾದವ್ ಪ್ರಕರಣದ ನಿರ್ವಹಣೆಯಲ್ಲಿ ಕೇಂದ್ರವು ಭಿನ್ನ ನಿಲುವು ತಳೆದಿದೆ ಎಂದಿದ್ದಾರೆ.
ಕೋಮುವಾದಿ ಹೇಳಿಕೆ ನೀಡಿರುವ ಯಾದವ್ ಅವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಲು ಆಗ್ರಹಿಸಿ ಪ್ರತಿಪಕ್ಷಗಳ ಸಂಸದರು ಕಳೆದ ವರ್ಷ ರಾಜ್ಯಸಭೆಯಲ್ಲಿ ನೋಟಿಸ್ ನೀಡಿ ಒತ್ತಾಯಿಸಿದ್ದರು. ಈ ಬಗ್ಗೆ ರಾಜ್ಯಸಭೆ ಅಧ್ಯಕ್ಷರು ನಿರ್ಧಾರ ಕೈಗೊಳ್ಳಬೇಕಿದೆ.
ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ವಿರುದ್ಧ ವಾಗ್ದಂಡನೆ ನಿಲುವಳಿಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇತ್ತೀಚೆಗೆ ತಿಳಿಸಿದ್ದರು.
ವರ್ಮಾ ಕುರಿತು ಮಾತನಾಡಿದ ಸಿಬಲ್ ಅವರು, ‘ನಾನು ವಾದ ಮಂಡಿಸಿರುವ ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ವರ್ಮಾ ಅವರೂ ಒಬ್ಬರು ಎಂದು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಇದನ್ನು ಯಾವುದೇ ವಕೀಲರಲ್ಲಿ ಕೇಳಬಹುದು’ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಪ್ರಸ್ತುತ ಯಾವುದೇ ಸಾಕ್ಷ್ಯವಿಲ್ಲದ ನ್ಯಾಯಮೂರ್ತಿಯನ್ನು ದಂಡಿಸಲು ಮುಂದಾಗಿದೆ. ಆದರೆ, ಸಾರ್ವಜನಿಕ ವೇದಿಕೆಯಲ್ಲಿಯೇ ಕೋಮುವಾದಿ ಹೇಳಿಕೆ ನೀಡಿದ್ದ ನ್ಯಾಯಮೂರ್ತಿಗಳನ್ನು ರಕ್ಷಿಸುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.