ADVERTISEMENT

ಯಶವಂತ್ ವರ್ಮಾ ವಿರುದ್ಧ FIR ದಾಖಲಿಸಲು ಕೋರಿ ಅರ್ಜಿ: ತುರ್ತು ವಿಚಾರಣೆಗೆ SC ನಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2025, 6:47 IST
Last Updated 26 ಮಾರ್ಚ್ 2025, 6:47 IST
<div class="paragraphs"><p>ನ್ಯಾಯಮೂರ್ತಿ ಯಶವಂತ್ ವರ್ಮಾ </p></div>

ನ್ಯಾಯಮೂರ್ತಿ ಯಶವಂತ್ ವರ್ಮಾ

   

–ಪಿಟಿಐ ಚಿತ್ರ

ನವದೆಹಲಿ: ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನೋಟುಗಳ ಕಂತೆ ಪತ್ತೆಯಾದ ಪ್ರಕರಣ ಕುರಿತು ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ADVERTISEMENT

ದೆಹಲಿಯಲ್ಲಿ ಇರುವ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಹೋಳಿ ಹಬ್ಬದ (ಮಾರ್ಚ್ 14-15ರ) ರಾತ್ರಿ 11.35ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಅದನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ತೆರಳಿದ್ದರು. ಬೆಂಕಿಯಿಂದ ಆದ ಹಾನಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದ್ದವು ಎನ್ನಲಾಗಿದೆ.

ಈಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಸುಪ್ರೀಂ ಕೋರ್ಟ್‌, ನ್ಯಾಯಮೂರ್ತಿ ವರ್ಮಾ ವಿರುದ್ಧ ಆಂತರಿಕ ವಿಚಾರಣೆ ಪ್ರಕ್ರಿಯೆಯನ್ನು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಅವರು ಆರಂಭಿಸಿದ್ದಾರೆ ಎಂದಿತ್ತು. ನ್ಯಾಯಮೂರ್ತಿ ವರ್ಮ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ತೀರ್ಮಾನವು ಬೇರೆಯದೇ ಆದ ವಿಚಾರ ಎಂಬ ಸ್ಪಷ್ಟನೆಯನ್ನು ಅದು ನೀಡಿತ್ತು.

ಸದ್ಯ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ಗೆ ವಾಪಸ್ ಕಳುಹಿಸಲು ಕೊಲಿಜಿಯಂ ನಿರ್ಧರಿಸಿದೆ. ವರ್ಮಾ ಅವರು ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿ ಎರಡನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ ಮತ್ತು ಕೊಲಿಜಿಯಂ ಸದಸ್ಯರಾಗಿದ್ದಾರೆ.

ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ನಿರ್ಣಯವನ್ನು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ಸಮಿತಿಯು (ಕೊಲಿಜಿಯಂ) ಮಂಗಳವಾರ ದೃಢೀಕರಿಸಿತ್ತು.

ಈ ನಡುವೆ, ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಮಾಡುವುದನ್ನು ವಿರೋಧಿಸಿ ಅಲ್ಲಿನ ಹೈಕೋರ್ಟ್‌ ವಕೀಲರ ಸಂಘವು ಸೋಮವಾರ ನಿರ್ಣಯ ಕೈಗೊಂಡಿತ್ತು. ವರ್ಮಾ ಅವರು ನೀಡಿರುವ ಆದೇಶಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೂಡ ಸಂಘವು ಮನವಿ ಮಾಡಿತ್ತು.

ನ್ಯಾಯಮೂರ್ತಿ ವರ್ಮಾ ಅವರ ವರ್ಗಾವಣೆ ವಿರೋಧಿಸಿ ಸಂಘದ ಸದಸ್ಯರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ ಎಂದು ಸಂಘ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.