ADVERTISEMENT

ನ್ಯಾ.ವರ್ಮಾ ವಿರುದ್ಧ LS ಸ್ಪೀಕರ್ ರಚಿಸಿದ ವಿಚಾರಣಾ ಸಮಿತಿಯಲ್ಲಿ ರಾಜ್ಯದ ಇಬ್ಬರು

ಪಿಟಿಐ
Published 12 ಆಗಸ್ಟ್ 2025, 11:31 IST
Last Updated 12 ಆಗಸ್ಟ್ 2025, 11:31 IST
<div class="paragraphs"><p>ನ್ಯಾ. ಅರವಿಂದ ಕುಮಾರ್,&nbsp;ನ್ಯಾ. ಮಹೀಂದ್ರ ಮೋಹನ ಶ್ರೀವಾಸ್ತವ ಹಾಗೂ&nbsp;ಬಿ.ವಿ. ಆಚಾರ್ಯ</p></div>

ನ್ಯಾ. ಅರವಿಂದ ಕುಮಾರ್, ನ್ಯಾ. ಮಹೀಂದ್ರ ಮೋಹನ ಶ್ರೀವಾಸ್ತವ ಹಾಗೂ ಬಿ.ವಿ. ಆಚಾರ್ಯ

   

ಬೆಂಗಳೂರು: ನಿವಾಸದಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಸಂಸದರು ಸಲ್ಲಿಸಿದ ನೋಟಿಸ್‌ ಆಧರಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ತ್ರಿಸದಸ್ಯ ವಿಚಾರಣಾ ಸಮಿತಿಯನ್ನು ರಚಿಸಿದ್ದಾರೆ.

ಈ ವಿಚಾರಣಾ ಸಮಿತಿಯಲ್ಲಿ ರಾಜ್ಯದವರೇ ಆದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ.ವಿ. ಆಚಾರ್ಯ ಮತ್ತು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಹೀಂದ್ರ ಮೋಹನ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ.

ADVERTISEMENT

ನ್ಯಾ. ಅರವಿಂದ ಕುಮಾರ್: ಬೆಂಗಳೂರು ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ನ್ಯಾ. ಅರವಿಂದ ಅವರು 1987ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ 2009ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2021ರಲ್ಲಿ ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದರು.

ನ್ಯಾ. ಮಹೀಂದ್ರ ಮೋಹನ ಶ್ರೀವಾಸ್ತವ: ಛತ್ತೀಸಗಢದವರಾದ ನ್ಯಾ. ಮಹೀಂದ್ರ ಮೋಹನ ಶ್ರೀವಾಸ್ತವ ಅವರು ಈ ಮೊದಲು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಹಾಲಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. 2009ರಲ್ಲಿ ಇವರು ಛತ್ತೀಸಗಢ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ಬಿ.ವಿ. ಆಚಾರ್ಯ: 91 ವರ್ಷದ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು ಕಳೆದ ಆರು ದಶಕಗಳಿಂದ ವಕೀಲಿ ವೃತ್ತಿಯಲ್ಲಿದ್ದಾರೆ. 1989ರಿಂದ 2012ರವರೆಗೆ ಅವರು ಐದು ಬಾರಿ ಕರ್ನಾಟಕದ ಅಡ್ವೊಕೇಟ್ ಜನರಲ್ ಆಗಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಹಾಗೂ ಇತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.