ನವದೆಹಲಿ: ವಿವಿಧ ಸಮುದಾಯದ ಜನರ ಸಾಮಾಜಿಕ ಸ್ಥಾನಮಾನ, ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಹೊಂದಿರುವ ಉದ್ಯೋಗದ ಮಾಹಿತಿ ತಿಳಿಯಲು ಜಾತಿಗಣತಿ ಅತಿಮುಖ್ಯ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಬುಧವಾರ ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಅಠವಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದು, ಹಲವು ವರ್ಷಗಳಿಂದ ಜಾತಿಗಣತಿಗಾಗಿ ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ.
'1998ರಲ್ಲೇ ನಾನು ಈ ಅಭಿಯಾನ ಆರಂಭಿಸಿದ್ದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಪ್ರತಿ ಜಾತಿಯ ಎಷ್ಟು ಜನರು ಉದ್ಯೋಗ ಹೊಂದಿದ್ದಾರೆ ಎಂಬುದನ್ನು ನಿರ್ಣಯಿಸುವ ಮಹತ್ವದ ಮಾಹಿತಿಯು ಈ ಕಾರ್ಯಕ್ರಮದಿಂದ ಲಭ್ಯವಾಗುತ್ತದೆ' ಎಂದಿದ್ದಾರೆ.
'ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸಲು ಜಾತಿವಾರು ಗಣತಿ ಅತ್ಯಗತ್ಯ' ಎಂದು ಪ್ರತಿಪಾದಿಸಿರುವ ಸಚಿವ, 'ಯಾವುದೇ ಸಮುದಾಯದ ಬಗ್ಗೆ ಮಾಹಿತಿ ಕಲೆಹಾಕಲು, ಜಾತಿಗಣತಿ ನಡೆಸುವುದು ಮುಖ್ಯ. ಪ್ರತಿ ಜಾತಿಯನ್ನು ಪಟ್ಟಿ ಮಾಡುವುದರಿಂದ ಯಾವ ಸಮುದಾಯವನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದುದು ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ.
'ಪ್ರತಿಯೊಂದು ಜಾತಿ ಕುರಿತ ವಾಸ್ತವಾಂಶ ಗೊತ್ತಿದ್ದರಷ್ಟೇ, ಎಲ್ಲರನ್ನೂ ಸಬಲೀಕರಣಗೊಳಿಸಲು ಸಾಧ್ಯ' ಎಂದು ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.