ADVERTISEMENT

ಜಾತಿಗಣತಿ ‌ವಿಷಯದಲ್ಲಿ ಕಾಂಗ್ರೆಸ್‌ ‍ತೋರಿದ್ದ ನಿಲುವು ಎಂಥಹದ್ದು?; ಮಾಯಾವತಿ ಕಿಡಿ

ಪಿಟಿಐ
Published 3 ಮೇ 2025, 10:05 IST
Last Updated 3 ಮೇ 2025, 10:05 IST
ಮಾಯಾವತಿ
ಮಾಯಾವತಿ   

ಲಖನೌ: ಜಾತಿಗಣತಿಗೆ ಸಂಬಂಧಿಸಿದಂತೆ ತನ್ನ ಪಕ್ಷ ತೋರಿದ್ದ ನಿಲುವನ್ನು ಕಾಂಗ್ರೆಸ್‌ ಮರೆತಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ದಲಿತರು ಮತ್ತು ಒಬಿಸಿಗಳಿಗೆ ಮೀಸಲಾತಿ ಸೇರಿದಂತೆ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಿದ ಕರಾಳ ಇತಿಹಾಸವನ್ನು ಕಾಂಗ್ರೆಸ್‌ ಮರೆತಿದೆ. ಆದರೆ ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಜಾತಿಗಣತಿ ನಡೆಸುವಂತೆ ಒತ್ತಾಯಿಸಿತ್ತು. ಕಾಂಗ್ರೆಸ್‌ ನಿಜವಾಗಿಯೂ ದಲಿತರು, ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯು ಜಾತಿಗಣತಿ ವಿಚಾರದಲ್ಲಿ ನಿರ್ಲಕ್ಷ್ಯದ ಧೋರಣೆ ತೋರಿತ್ತು. ಆದರೆ ಸಾರ್ವಜನಿಕವಾಗಿ ಒತ್ತಡ ಹೆಚ್ಚಾದ್ದರಿಂದ ಕೇಂದ್ರ ಸರ್ಕಾರ ಜಾತಿಗಣತಿಗೆ ಸೂಚನೆ ನೀಡಿದೆ. ಈ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಮಾಯಾವತಿ ತಿಳಿಸಿದ್ದಾರೆ.

ADVERTISEMENT

ಜಾತಿಗಣತಿಗೆ ಸಂಬಂಧ ಕಾಂಗ್ರೆಸ್‌ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಒಲವು ಹೊಂದಿರುವಂತೆ ಪ್ರದರ್ಶಿಸಿದೆ. ವಾಸ್ತವವಾಗಿ ವೋಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಜಾತಿಗಣತಿಯ ಒಲವು ತೋರಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ವಾಸ್ತವವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಜಾತಿಗಣತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಹೊರತು ಜನರ ಮೇಲಿನ ನಿಜವಾದ ಹಿತಾಸಕ್ತಿಯಿಂದಲ್ಲ ಎಂದು ಮಾಯಾವತಿ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.