ADVERTISEMENT

ಕೊಚ್ಚಿ ಮೆಟ್ರೊ ಪಿಲ್ಲರ್ ಬಳಿ ಸಿಲುಕಿ 4 ದಿನದಿಂದ ಸತಾಯಿಸಿದ್ದ ಬೆಕ್ಕಿನ ರಕ್ಷಣೆ

ಪಿಟಿಐ
Published 22 ಫೆಬ್ರುವರಿ 2026, 5:19 IST
Last Updated 22 ಫೆಬ್ರುವರಿ 2026, 5:19 IST
ಜಿನ್ ಮಿನ್ ಕ್ಯಾಟ್ ವರ್ಲ್ಡ್‌ನಲ್ಲಿರುವ ‌ಬೆಕ್ಕು
ಜಿನ್ ಮಿನ್ ಕ್ಯಾಟ್ ವರ್ಲ್ಡ್‌ನಲ್ಲಿರುವ ‌ಬೆಕ್ಕು   

ಕೊಚ್ಚಿ: ಇದೊಂದು ಬೆಕ್ಕಿನ ಕಥೆ.. ಕೊಚ್ಚಿ ಮೆಟ್ರೊ ರೈಲಿನ ಪಿಲ್ಲರ್‌ನಲ್ಲಿ ಸಿಲುಕಿದ್ದ ಈ ಬೆಕ್ಕು ಪ್ರಾಣಿಪ್ರಿಯರು ಮತ್ತು ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆ ತಂಡಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹಲವು ಬಾರಿ ಕೈಗೆ ಸಿಗದೇ ಸತಾಯಿಸಿತ್ತು. 4 ದಿನಗಳ ಟಾಮ್ ಜೆರಿ ಆಟದಂತೆ ನಡೆದ ಕಾರ್ಯಾಚರಣೆಯಲ್ಲಿ ಬೆಕ್ಕನ್ನು ಕೊನೆಗೂ ರಕ್ಷಿಸಲಾಗಿದೆ.

ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳ ಪ್ರಕಾರ, ಕೊಚ್ಚಿಯ ಕಲೂರಿನ ಜವಾಹರಲಾಲ್ ನೆಹರು ಕ್ರೀಡಾಂಗಣದ ಮೆಟ್ರೊ ನಿಲ್ದಾಣದ ಬಳಿಯ ಕಂಬದ ಮೇಲೆ ಬೆಕ್ಕು ಇದ್ದದ್ದನ್ನು ಆ ಪ್ರದೇಶದ ಆಟೊ ಚಾಲಕರು ಮೊದಲ ಗಮನಿಸಿದ್ದರು. ಗುರುವಾರ ಬೆಕ್ಕನ್ನು ರಕ್ಷಿಸಲು ಪ್ರಯತ್ನಿಸಲಾಯಿತು, ಆದರೆ, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಾ ಕಣ್ಣು ತಪ್ಪಿಸುತ್ತಿದ್ದ ಅದನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೊ ಹಳಿ ಕೆಳಗಿನ ಭಾಗದ ಪಿಲ್ಲರ್‌ನಲ್ಲಿ ಸಿಕ್ಕಿಬಿದ್ದ ಬೆಕ್ಕಿನ ಬಗ್ಗೆ ವರದಿಗಳ ನಂತರ, ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಕಿಲಾಡಿ ಬೆಕ್ಕು ಪಿಲ್ಲರ್ ಮೇಲಿನ ಪೊಟರೆಗೆ ಹೋಗಿತಪ್ಪಿಸಿಕೊಳ್ಳುತ್ತಿತ್ತು. ರಕ್ಷಣಾ ಕಾರ್ಯಾಚರಣೆಗೆ ಸಿಬ್ಬಂದಿ ಯತ್ನಿಸುತ್ತಿದ್ದರೆ, ನನಗೇನೊ ಮಾಡುತ್ತಾರೇನೊ ಎಂಬ ಭಯದಲ್ಲಿ ಬೆಕ್ಕು ಅತ್ತಿತ್ತ ಚಲಿಸುತ್ತಿತ್ತು. ಈ ನಡುವೆ, ಹೈಡ್ರಾಲಿಕ್ ಕ್ರೇನ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಅವರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.

ADVERTISEMENT

ನಂತರ, ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಶನಿವಾರ ಸಂಜೆ ಮತ್ತೊಂದು ಪ್ರಯತ್ನ ಮಾಡಿದ್ದರು. ಕೊಚ್ಚಿ ಮೆಟ್ರೊ ರೈಲು ಲಿಮಿಟೆಡ್(ಕೆಎಂಆರ್‌ಎಲ್) ಅಧಿಕಾರಿಗಳು 15 ನಿಮಿಷಗಳಿಗೂ ಹೆಚ್ಚು ಕಾಲ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವ ಮೂಲಕ ಬೆಂಬಲ ನೀಡಿದ್ದರು. ಆದರೂ, ಬೆಕ್ಕನ್ನು ಗುರುತಿಸಲು ಸಾಧ್ಯವಾಗದೆ ಆ ಪ್ರಯತ್ನವೂ ವಿಫಲವಾಯಿತು.

ಈ ನಡುವೆ ಬೆಕ್ಕು ಬದುಕಿ ಉಳಿಯಲೆಂದು ಪಿಲ್ಲರ್ ಮೇಲ್ಭಾಗದಲ್ಲಿ ಆಹಾರವನ್ನು ಸಹ ಇಡಲಾಗಿತ್ತು.

ಕುತೂಹಲಕಾರಿ ಸಂಗತಿಯೆಂದರೆ, ಆಟೊ ಚಾಲಕರು ಈ ಬೆಕ್ಕಿಗೆ ಸುಭಾಶ್ ಎಂದು ಹೆಸರಿಟ್ಟಿದ್ದರು. ಇದು ಮಲಯಾಳದ ಮುಂಜುಮ್ಮೆಲ್ ಬಾಯ್ಸ್ ಚಿತ್ರದಲ್ಲಿ ಗುನಾ ಗುಹೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರ ಹೆಸರಾಗಿದೆ.

ಬಳಿಕ, ಭಾನುವಾರ ಬೆಳಗಿನ ಜಾವ ಮೆಟ್ರೊ ಕಾರ್ಯಾಚರಣೆ ಸ್ಥಗಿತಗೊಂಡ ಬಳಿಕ ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಲಾಗಿದೆ.

ಭಾನುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ರಕ್ಷಣಾ ಪೆಟ್ಟಿಗೆ ಮತ್ತು ಬಲೆಗಳನ್ನು ಹೊಂದಿದ್ದ ಇಬ್ಬರು ಸಿಬ್ಬಂದಿ ಕಂಬದ ಮೇಲ್ಭಾಗಕ್ಕೆ ತಲುಪಿ ಬೆಕ್ಕನ್ನು ಗುರುತಿಸಿ ಅದನ್ನು ರಕ್ಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಕ್ಕನ್ನು ಕೆಳಗಿಳಿಸುತ್ತಿದ್ದಂತೆ, ಸ್ಥಳದಲ್ಲಿ ನೆರೆದಿದ್ದ ದೊಡ್ಡ ಜನಸಮೂಹ ಅಧಿಕಾರಿಗಳಿಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಿದೆ. ನಂತರ ಬೆಕ್ಕನ್ನು ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೊ ಕಂಬದ ಮೇಲೆ ಸಿಲುಕಿಕೊಂಡ ಬೆಕ್ಕನ್ನು ರಕ್ಷಿಸುತ್ತಿರುವುದು ಇದು ಮೂರನೇ ಬಾರಿ ಎಂದು ಗಾಂಧಿ ನಗರ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಬದ ಎತ್ತರವನ್ನು ಆ ಬೆಕ್ಕು ಬಹುಶಃ ಅದು ನಿಲ್ದಾಣದಿಂದ ಪ್ರವೇಶಿಸಿರಬಹುದು. ಜೀವ ಉಳಿಸಲು, ನಾವು ಕಾರ್ಯಾಚರಣೆಯನ್ನು ಮುಂದುವರಿಸಿದ್ದೆವು, ಮೆಟ್ರೊ ಅಧಿಕಾರಿಗಳು ಸಹ ಸಹಕರಿಸಿದರು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.